ಬೆಂಗಳೂರು: ಪಂಚಮಸಾಲಿಗಳು ಸಹಿತ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಪ್ರಸ್ತಾವನೆಗೆ ಸರ್ಕಾರ ನೀಡಿರುವ ಸಕಾರಾತ್ಮಕ ಸ್ಪಂದನೆಗೆ ಕರ್ನಾಟಕ ಕ್ಷತ್ರೀಯ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿಂದು ನಡೆದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಕ್ಷತ್ರೀಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್, ವೀರಶೈವ ಲಿಂಗಾಯತ ಸಮುದಾಯ ಹಾಗೂ ಅದರ ಉಪಜಾತಿಗಳನ್ನು 2ಎ ಪ್ರವರ್ಗಕ್ಕೆ ಸೇರ್ಪಡೆಗೊಳಿಸಿದರೆ ಕ್ಷತ್ರೀಯ ಜನಾಂಗ ಸಹಿತ ಅತಿ ಹಿಂದುಳಿದ 102ಕ್ಕೂ ಅಧಿಕ ಜಾತಿಗಳಿಗೆ ತಾರತಮ್ಯ ಎಸಗಿದಂತಾಗುತ್ತದೆ. ಇಂದು ಲಿಂಗಾಯತ ಸಮುದಾಯವೇ ಅತ್ಯಂತ ಬಲಿಷ್ಠವಾಗಿದ್ದು, ರಾಜಕೀಯದಲ್ಲಿ ಶೇ. 25ರಷ್ಟು ಪಾಲು ಲಿಂಗಾಯತ ಸಮುದಾಯವೇ ಹೊಂದಿದೆ. ಅಲ್ಲದೇ ಎಲ್ಲ ವರ್ಗಗಳಲ್ಲಿ ಲಿಂಗಾಯತವೇ ಮೇಲುಗೈ ಸಾಧಿಸಿದ್ದು, 2ಎ ವರ್ಗಕ್ಕೆ ಸೇರಿಸುವುದು ಅಸಮಂಜಸವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.