ಬೆಂಗಳೂರು:ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಶನಿವಾರ (ಜನವರಿ 13) ನಡೆಯಲಿದೆ. ಇದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ವಿವಿಧ ರೀತಿಯ 41 ವಿಷಯಗಳಿಗೆ (Subjects) ಪರೀಕ್ಷೆ ನಡೆಯುತ್ತಿದ್ದು, ಒಟ್ಟೂ 1,17,302 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ನಗರ ಸೇರಿದಂತೆ ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ, ತುಮಕೂರು, ಮೈಸೂರು, ಮಂಡ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ. ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಶನಿವಾರ ಬೆಳಗ್ಗೆ 10 ರಿಂದ 11 ಗಂಟೆವರೆಗೆ ಎಲ್ಲ ವಿಷಯಗಳ ಅಭ್ಯರ್ಥಿಗಳಿಗೆ ಸಾಮಾನ್ಯ ಪರೀಕ್ಷೆ (ಪೇಪರ್-1) ನಡೆಯಲಿದೆ. ಅದಾದ ನಂತರ ಅದೇ ಪರೀಕ್ಷಾ ಕೇಂದ್ರಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪರೀಕ್ಷೆ (ಪೇಪರ್-2) ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಇರಲಿದೆ. ಒಮ್ಮೆ ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗಳು ಹೋದ ಮೇಲೆ ಎರಡೂ ಪತ್ರಿಕೆಗಳ ಪರೀಕ್ಷೆಗಳು ಮುಗಿದ ನಂತರವೇ ಹೊರಹೋಗಲು ಅವಕಾಶ ನೀಡಲಾಗಿದೆ. ಕಟ್ಟುನಿಟ್ಟಿನ ತಪಾಸಣೆ ಇರುವ ಕಾರಣ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಎರಡು ಗಂಟೆ ಮೊದಲೇ ಬರಬೇಕು ಎಂದು ನಿರ್ದೇಶಕರು ಸೂಚಿಸಿದ್ದಾರೆ.