ಬೆಂಗಳೂರುಮತದಾರರ ಕಾಲಿಗೆ ಬಿದ್ದು ವೋಟ್ ಪಡೆದು ಸಿಎಂ, ಡಿಸಿಎಂ ಆಗಿದ್ದಾರೆ. ಈಗ ಅದೇ ಜನರಿಗೆ ಈಗ ಹಾದಿ ಬೀದೀಲಿ ಹೋಗೋರು ಅಂತಿರೋದು ಸರಿಯಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾದಿ ಬೀದಿಯಲ್ಲಿ ಹೋಗೋರಿಗೆಲ್ಲ ಗ್ಯಾರಂಟಿ ಸ್ಕೀಂ ಕೊಡಲ್ಲ ಎಂಬ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಚುನಾವಣೆ ಮುಂಚೆ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಗ್ಯಾರಂಟಿ ಜಾರಿಯ ಭರವಸೆ ಕೊಟ್ಟಿದ್ರು. ಮೊದಲ ಸಂಪುಟ ಸಭೆಯಲ್ಲೇ ಜಾರಿಯ ಭರವಸೆ ಕೊಟ್ಟಿದ್ರು. ಜಾರಿಗೆ ತರೋದು ಬಿಡೋದು ಆಮೇಲೆ, ಆದ್ರೆ ಹಾದಿ ಬೀದೀಲಿ ಹೋಗೋರಿಗೆಲ್ಲ ಕೊಡೋಕಾಗಲ್ಲ ಅಂತಿದಾರೆ ಈಗ. ಮತ್ತೆ ಅದೇ ಜನರ ಎದುರು ಲೋಕಸಭೆ ಚುನಾವಣೆಗೆ ಮತ ಕೇಳೋಕ್ಕೆ ಹೋಗಬೇಕು ಎಂದು ಕಿಡಿಕಾರಿದರು.
ಆಗ ಹಾದಿ ಬೀದಿಲಿರೋರ ಬಳಿ ಮತ ಕೇಳಬೇಡಿ ಅಂತ ಜನ ಇವರಿಬ್ಬರಿಗೆ ಛೀಮಾರಿ ಹಾಕಿ ಮನೆಗೆ ಕಳಿಸ್ತಾರೆ. ಚುನಾವಣೆ ಮೊದಲು ಎಲ್ಲರಿಗೂ ಉಚಿತ ಅಂತ ಭರವಸೆ ಕೊಟ್ರು. ಆದ್ರೆ ಈಗ ಕಾಂಗ್ರೆಸ್ ನಾಯಕರು ಮಾತನಾಡುತ್ತಿರೋ ರೀತಿ ಸರಿಯಲ್ಲ. ಕಾಂಗ್ರೆಸ್ ರಾಜ್ಯದ ಮತದಾರರಿಗೆ ಅವಮಾನ ಮಾಡಿದೆ. ಸಿಎಂ, ಡಿಸಿಎಂ ಇಬ್ಬರೂ ರಾಜ್ಯದ ಜನರ ಕ್ಷಮೆ ಕೇಳಬೇಕು. ರಾಜ್ಯದ ಜನ ಹಾದಿ ಬೀದಿಯಲ್ಲಿ ಹೋಗೋರಲ್ಲ. ಜನ ನಿಮ್ಮ ಕಾಲಿಗೆ ಬಿದ್ದು ಮತ ಕೊಡುತ್ತೇವೆ ಅಂತ ಹೇಳಲಿಲ್ಲ. ನೀವೇ ಜನರ ಕಾಲಿಗೆ ಬಿದ್ದು ಮತ ಕೊಡಿ ಮತ ಕೊಡಿ ಅಂದಿದ್ರಿ. ಈಗ ಹಾದಿ ಬೀದೀಲಿ ಹೋಗೋರಿಗೆ ಗ್ಯಾರಂಟಿ ಕೊಡಲ್ಲ ಅಂತಿದೀರಿ. ತಕ್ಷಣ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.