ಬೆಂಗಳೂರು: ನನ್ನನ್ನು ಸಂಪುಟದಿಂದ ಬಿಡಬಹುದು ಅಥವಾ ಸಂಪುಟಕ್ಕೆ ಸೇರಿಸಿಕೊಳ್ಳಬಹುದು. ಕೇಂದ್ರದ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧ ಎಂದು ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಐದನೇ ಬಾರಿಗೆ ಬಿಜೆಪಿಯವರೇ ಸಿಎಂ ಆಗ್ತಾರೆ. ಹರ್ಷವರ್ಧನ್, ರವಿ ಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್ ಎಲ್ಲರನ್ನು ಬಿಟ್ಟಿದ್ದಾರೆ. ನಮ್ಮ ಪಕ್ಷದ ಎಷ್ಟೋ ಪ್ರಮುಖ ನಾಯಕರನ್ನು ಬೇರೆ ಬೇರೆ ಹಂತದಲ್ಲಿ ಕೈ ಬಿಟ್ಟಿದ್ದಾರೆ. ಇನ್ನು ಈಶ್ವರಪ್ಪ ಯಾವೂರ ದಾಸಯ್ಯ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ ಯಡಿಯೂರಪ್ಪನವರು ನಾಲ್ಕು ಬಾರಿ ಸಿಎಂ ಆಗಿದ್ದಾರೆ. ದುರಂತ ಅಂದ್ರೆ ಪೂರ್ಣ ಬಹುಮತ ಸಿಕ್ಕಿಲ್ಲ. ಮುಂದೆ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ, ಪಕ್ಷದ ನಾಯಕರ ನೇತೃತ್ವದಲ್ಲಿ ಚುನಾವಣೆ ಎಸುರಿಸುತ್ತೇವೆ. ನನಗೆ ಈಗಲೂ ನೂರಾರು ಮಂದಿ ಫೋನ್ ಮಾಡ್ತಿದ್ದಾರೆ. ಯಡಿಯೂರಪ್ಪ, ಅನಂತ್ ಕುಮಾರ್ ನೀವೆಲ್ಲಾ ಹಿರಿಯರು, ಪಕ್ಷ ಕಟ್ಟಿದವರು, ನಿಮ್ಮನ್ನು ಬಿಡಬಾರದು ಅಂತ ಅಭಿಮಾನಿಗಳು, ಸ್ವಾಮೀಜಿಗಳು ಹೇಳ್ತಿದ್ದಾರೆ. ಡಿಸಿಎಂ ಆದರೂ ಮಾಡಬೇಕಿತ್ತು ಅಂತ ಹೇಳುತ್ತಿದ್ದಾರೆ ಎಂದರು.
ಈಶ್ವರಪ್ಪ ಡಿಸಿಎಂ ಆಗೇಕು ಎಂದು ಸ್ವಾಮೀಜಿಗಳು ಹೇಳಿದ ವಿಚಾರದ ಕುರಿತು ಮಾತನಾಡಿದ ಅವರು, ಸ್ವಾಮೀಜಿಗಳು ಪ್ರೀತಿ ವಿಶ್ವಾಸದಿಂದ ಕರೆ ಮಾಡುತ್ತಿದ್ದಾರೆ. ಸಿಎಂ ಆಗಬೇಕಿತ್ತು, ಡಿಸಿಎಂ ಆಗಬೇಕಿತ್ತು ನೀವು ಅಂತ ಸ್ವಾಮೀಜಿಗಳು ಕೂಡ ಹೇಳುತ್ತಿದ್ದಾರೆ. ಬಿಜೆಪಿಯಲ್ಲಿ ಹಿರಿಯರು ಇದ್ದಾರೆ. ಅವರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ಬದ್ಧನಾಗಿರಬೇಕು ಎಂದು ಸ್ಪಷ್ಟಪಡಿಸಿದರು.
ಬೊಮ್ಮಾಯಿ ಜನತಾ ಪಕ್ಷದವರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಿಜೆಪಿ ಪಕ್ಷ ನಮ್ಮ ತಾಯಿ ಇದ್ದ ಹಾಗೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಮಗ ಅಂತಾರೆ, ಬಾದಾಮಿ ಅಳಿಯ ಅಂತಾರೆ, ಚಾಮರಾಜಪೇಟೆಯನ್ನು ಸೊಸೆ ಅಂತಾರೆ. ನಿನ್ನ ಅಪ್ಪ ಯಾರು? ಎಂದು ಪ್ರಶ್ನಿಸಿದರು. ನಂತರ ನಿಮ್ಮ ತಾಯಿ ಪಕ್ಷ ಯಾವುದು ಮೊದಲು ಹೇಳಿ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿರುವುದು ಜೆಡಿಎಸ್ ಸರ್ಕಾರ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬೇರೆ ಪಕ್ಷದವರೂ ಕೂಡ ಸೇರುತ್ತಿದ್ದಾರೆ. ಬಿಜೆಪಿ ಹಾಲು ಇದ್ದ ಹಾಗೆ, ಬೊಮ್ಮಯಿ ಜೇನು. ಹಾಲು ಬದಲಾಗಲ್ಲ, ಹಾಲಿಗೆ ಸಿಹಿಯಾಗಿ ಬೊಮ್ಮಾಯಿ ಸೇರಿಕೊಂಡಿದ್ದಾರೆ ಎಂದರು.
ಕಲ್ಲಡ್ಕ ಪ್ರಭಾಕರ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಲ್ಲಡ್ಕ ಪ್ರಭಾಕಾರ್ ಅವರು ಬೆಳಗ್ಗೆ ಭೇಟಿಗೆ ಬಂದಿದ್ರು. ಇದರಲ್ಲಿ ವಿಶೇಷತೆ ಏನೂ ಇಲ್ಲ ಎಂದು ತಿಳಿಸಿದರು.