ಬೆಂಗಳೂರು: ಗ್ರಾಮೀಣ ಜನರ ಬದುಕು ಹಸನಾಗಿಸುವಲ್ಲಿ, ಗ್ರಾಮ ಮಟ್ಟದ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಉತ್ತಮ ಪ್ರಗತಿ ತೋರುತ್ತಿರುವ ಆಂಧ್ರಪ್ರದೇಶ ಮತ್ತು ಕೇರಳಕ್ಕೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳ ನಿಯೋಗವನ್ನು ಕಳುಹಿಸಿಕೊಡಲು ನಿರ್ಧರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ವಿಧಾನಪರಿಷತ್ಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳ ಜೊತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಗ್ರಾಮೀಣ ಭಾಗದ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಮಹಾಂತೇಶ ಕವಟಗಿಮಠ, ಎನ್ ನಾರಾಯಣಸ್ವಾಮಿ, ಹಾಗೂ ಇತರ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸಚಿವ ಈಶ್ವರಪ್ಪ, ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಮುಖಾಂತರ ರಾಜ್ಯದಲ್ಲಿ ಇರುವಂತಹ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದ 25 ಜನ ವಿಧಾನಪರಿಷತ್ ಸದಸ್ಯರ ಜೊತೆಗೆ ವಿಶೇಷವಾದ ಸಭೆ ನಡೆಸಲಾಯಿತು. ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದ ವಿಧಾನಪರಿಷತ್ ಸದಸ್ಯರು ಸಾಕಷ್ಟು ಅನುಭವಿಗಳಿದ್ದಾರೆ. ಅವರು ಗ್ರಾಮೀಣ ಪ್ರದೇಶದ ಜನರ ನಡುವೆಯೇ ಬದುಕುತ್ತಿದ್ದಾರೆ. ಅಲ್ಲದೆ, ಗ್ರಾಮೀಣ ಪ್ರದೇಶದ ಜನರಿಂದಲೇ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಹಾಗಾಗಿ, ಅನೇಕ ಸಲಹೆಗಳನ್ನು ಇಂದು ಕೊಟ್ಟಿದ್ದಾರೆ. ಗ್ರಾಮೀಣ ಜನರ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಏನು ಮಾಡಬೇಕು? ಗ್ರಾಮ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ಇನ್ನೇನು ಮಾಡಬೇಕು? ಬೇರೆ ಬೇರೆ ರಾಜ್ಯದಲ್ಲಿ ಯಾವ ರೂಪದಲ್ಲಿದೆ? ಎನ್ನುವ ಎಲ್ಲಾ ವಿಷಯಗಳನ್ನು ಕೂಡ ಇಂದು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಬಹಳ ಸಂತೋಷದಿಂದ ಅವರ ಸಲಹೆಗಳನ್ನು ಸ್ವೀಕಾರ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಯಶಸ್ವಿಯಾಗಲಿದ್ದೇವೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ಹೆಚ್ಚಾಗಿ ಗ್ರಾಮಗಳ ಅಭಿವೃದ್ಧಿ ಪಡಿಸಲು ಶ್ರಮ ಹಾಕುತ್ತಿದ್ದಾರೆ ಎನ್ನುವುದು ಗಮನಕ್ಕೆ ಬಂದಿದೆ. ಹಾಗಾಗಿ, ನಮ್ಮ ರಾಜ್ಯದಲ್ಲಿ ವಿಧಾನಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ಜನಪ್ರತಿನಿಗಳ ಜೊತೆಗೆ ಉನ್ನತ ಅಧಿಕಾರಿಗಳನ್ನು ಒಳಗೊಂಡ ನಿಯೋಗವನ್ನು ಆಂಧ್ರ ಹಾಗೂ ಕೇರಳಕ್ಕೆ ಕಳುಹಿಸುವ ತೀರ್ಮಾನ ತೆಗೆದುಕೊಂಡಿದ್ದೇವೆ. ಮುಂದಿನ ತಿಂಗಳು ಪ್ರವಾಸವನ್ನೂ ಆಯೋಜಿಸಲಾಗುತ್ತದೆ ಎಂದರು.
ಸ್ಟಾರ್ ಹೋಟೆಲ್ ಸಭೆ ಬೇಕಿತ್ತಾ?