ಬೆಂಗಳೂರು: ರಾಹುಲ್ ಗಾಂಧಿ ರಾಜ್ಯಕ್ಕೆ ಬಂದರೆ ಕಾಂಗ್ರೆಸ್ಗೆ ಬರುವ ವೋಟ್ ಬರಲ್ಲ ಎಂದು ಕೆ.ಎಸ್ ಈಶ್ವರಪ್ಪ ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೋದಿ ಪ್ರವಾಸಕ್ಕೆ ಕಾಂಗ್ರೆಸ್ ಟೀಕೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೋದಿ ಈ ದೇಶದವರೇ. ಮೋದಿ ಕಂಡರೆ ಕಾಂಗ್ರೆಸ್ಗೆ ಭಯ. ಮೋದಿ ರಾಜ್ಯಕ್ಕೆ ಬರಬಾರದಾ?, ಯಾವುದನ್ನು ಟೀಕೆ ಮಾಡಬೇಕು ಎಂಬ ಕಲ್ಪನೆ ಇಲ್ಲ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯನ್ನು ಯಾಕೆ ಕರೆಸುತ್ತಿಲ್ಲ?. ಮೊದಲು ರಾಹುಲ್ ಗಾಂಧಿನ ರಾಜ್ಯಕ್ಕೆ ಕರೆಸುತ್ತಿದ್ದರು. ಆದರೆ ಈಗ ಕರೆಸುತ್ತಿಲ್ಲ. ಯಾಕೆಂದರೆ ಅವರು ರಾಜ್ಯಕ್ಕೆ ಬಂದರೆ ಕಾಂಗ್ರೆಸ್ಗೆ ಬರುವ ವೋಟ್ ಕೂಡ ಬರಲ್ಲ ಎಂದು ವ್ಯಂಗ್ಯವಾಡಿದರು.
ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರನ್ನು ರಾಜ್ಯಪಾಲರಾಗಿ ಮಾಡಿದಕ್ಕೆ ಟೀಕೆ ಮಾಡ್ತಾರೆ. ಎಷ್ಟು ದಿನ ಟೀಕೆ ಮಾಡ್ತಾರೆ ನೋಡೋಣ. ಈಗ ವಿರೋಧ ಪಕ್ಷದಲ್ಲಿ ಇದ್ದಾರೆ. ಎಲೆಕ್ಷನ್ ಆದ್ಮೇಲೆ ಅದು ಇರಲ್ಲ ಎಂದು ಕುಟುಕಿದರು.
ಶಿವಮೊಗ್ಗದಲ್ಲಿ ಶಾಂತಿ ಇದೆ: ಆಯನೂರು ಮಂಜುನಾಥ್ ಪರವಾಗಿ ಶಿವಮೊಗ್ಗದಲ್ಲಿ ಪೋಸ್ಟರ್ ವೈರಲ್ ಆಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರವರ ಅಭಿಪ್ರಾಯ ಹೇಳುತ್ತಾರೆ. ಎಲ್ಲಾ ವ್ಯಕ್ತಿಗಳು ಅವರ ಅಭಿಪ್ರಾಯ ಹೇಳಬಹುದು. ಶಿವಮೊಗ್ಗದಲ್ಲಿ ಫಸ್ಟ್ ಕ್ಲಾಸ್ ಆಗಿ ಶಾಂತಿ ಇದೆ. ಶಾಂತಿ ಕೆಡಿಸಿದವರು ಇಂದು ಜೈಲಿನಲ್ಲಿ ಇದ್ದಾರೆ ಎಂದು ಸ್ಪಷ್ಟನೆ ನೀಡಿದರು. ಇದು ವೈಯಕ್ತಿಕ ಅಭಿಪ್ರಾಯ. ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ ನಾಯಕರಿಗೆ ಬಿಟ್ಟದ್ದು. ಆಯನೂರು ಮಂಜುನಾಥ್ ಅವರ ಅಭಿಪ್ರಾಯ ಹೇಳಿದ್ದಾರೆ. ಅದನ್ನು ಇಷ್ಟೊಂದು ದೊಡ್ಡದಾಗಿ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.