ಬೆಂಗಳೂರು: ಶೇ. 40ರಷ್ಟು ಕಮಿಷನ್ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರಿಗೆ ರಿಲೀಫ್ ಸಿಕ್ಕಿದ್ದು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಈಶ್ವರಪ್ಪ ಕಾರಣ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದು ತನಿಖಾಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಹೀಗಾಗಿ ಕೆ.ಎಸ್.ಈಶ್ವರಪ್ಪ ಅವರು ಮತ್ತೆ ಸಂಪುಟ ಸೇರ್ಪಡೆಗೆ ಹಾದಿ ಸುಗಮವಾಗಿದೆ. ಈಶ್ವರಪ್ಪ ಜೊತೆಗೆ ರಮೇಶ್ ಜಾರಕಿಹೊಳಿ ಅವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಲು ವರಿಷ್ಠರು ಉದ್ದೇಶಿಸಿದ್ದಾರೆ ಎನ್ನಲಾಗುತ್ತಿದೆ.
ಕಳೆದ ವಾರ ಬಿ ರಿಪೋರ್ಟ್ ಸಲ್ಲಿಕೆಯಾಗುವ ಸಾಧ್ಯತೆ ಇತ್ತು. ಆದರೆ ಬುಧವಾರ ವರದಿ ಸಲ್ಲಿಕೆಯಾಗಿದ್ದು, ಈ ಮೂಲಕ ಶೇ. 40ರಷ್ಟು ಕಮಿಷನ್ ಹಗರಣದಲ್ಲಿ ಈಶ್ವರಪ್ಪ ಅವರಿಗೆ ಮೊದಲ ಗೆಲುವು ದೊರೆತಿದೆ. ಆದರೆ ಈಶ್ವರಪ್ಪ ಸಂಪುಟ ಪ್ರವೇಶಕ್ಕೆ ರಮೇಶ್ ಜಾರಕಿಹೊಳಿ ಅಡ್ಡಿಯಾಗಿದ್ದಾರೆ. ಈ ಹಿಂದೆ ಸಿಡಿ ಹಗರಣದಲ್ಲಿ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಈ ಪ್ರಕರಣವೂ ಕೆಲ ದಿನಗಳಲ್ಲೇ ಬಗೆಹರಿಯಲಿದೆ. ಅವರು ಖುಲಾಸೆಗೊಂಡರೆ, ಇಬ್ಬರೂ ಒಟ್ಟಿಗೆ ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.