ಬೆಂಗಳೂರು: ಸಿರಿಧಾನ್ಯಗಳನ್ನು ಬಳಸಿಕೊಂಡು ಅವುಗಳ ಮೌಲ್ಯವರ್ಧಿಸಿ ಹಲವು ಫ್ಲೇವರ್‌ಗಳಲ್ಲಿ ರುಚಿಕರ ಹಾಗೂ ಪೌಷ್ಠಿಕಯುಕ್ತ ಆಹಾರ ಪದಾರ್ಥಗಳನ್ನು ಕೃಷಿ ಮೇಳದಲ್ಲಿ ತಯಾರಿಸಲಾಯಿತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯ ಮಳಿಗೆಯಲ್ಲಿ ನವಣೆ, ಬರಗು, ಊದಲು, ಹಾರಕ ಮತ್ತು ರಾಗಿಯಿಂದ ತಯಾರಿಸಿದ ಬಗೆಬಗೆಯ ಬಿಸ್ಕತ್, ಕೇಕ್, ಸ್ಪಾಂಜ್ ಕೇಕ್, ರಸ್ಕ್ ಮತ್ತು ಪಿಜ್ಜಾ ಸೇರಿದಂತೆ ಮತ್ತಿತರ ಬೇಕರಿ ಉತ್ಪನ್ನಗಳನ್ನು ಪ್ರದರ್ಶಿಸಲಾಗಿತ್ತು. ಅವುಗಳನ್ನು ತಯಾರಿಸುವ ಬಗ್ಗೆಯೂ ಜನರಿಗೆ ಮಾಹಿತಿ ನೀಡಲಾಗಿತ್ತು. ವಿಶೇಷವೇನೆಂದರೆ ಹೆಚ್ಚಿನ ತಿನಿಸುಗಳಿಗೆ ಮೈದಾ ಬಳಸುವ ಬದಲು ಸಾಮೆ ಹಿಟ್ಟು ಬಳಸಿ ತಯಾರಿಸಿರುವುದನ್ನು ಕಾಣಬಹುದಾಗಿತ್ತು.
ಜನರೇ ಬಾಣಸಿಗರಾಗಿ ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯ ಮಳಿಗೆಯಲ್ಲಿ ಆಹಾರ ತಯಾರಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಪಿಜ್ಜಾ ಮಾಡಲು 60 ರೂ. ಹಾಗೂ ಬಿಸ್ಕೆಟ್ ಮಾಡಲು 20 ರೂ.ಗಳಂತೆ ಸಂಸ್ಥೆಯ ತರಬೇತುದಾರರ ಮಾರ್ಗದರ್ಶನದೊಂದಿಗೆ ತಮ್ಮಿಷ್ಟದ ಫ್ಲೇವರ್‌ನ ಬಿಸ್ಕತ್, ಕೇಕ್ ಮತ್ತು ಪಿಜ್ಜಾವನ್ನು ಜನರೇ ಮಾಡಿ ಅನುಭವ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಇದು ನೋಡುಗರಲ್ಲೂ ಆಸಕ್ತಿ ಹೆಚ್ಚಿಸಿತ್ತು.
ಮಳಿಗೆಯಲ್ಲಿ ವಿವಿಧ ಬೇಕರಿ ತಿನಿಸುಗಳು, ರಾಗಿ ಅಂಬಲಿ ಹಾಗೂ ಚಕ್ಕಲಿ, ರಾಗಿ, ಅಗಸೆ ಬೀಜದ ಲಡ್ಡು, ಊದಲು ಬಿಸ್ಕತ್, ಹಾರಕ, ನವಣೆ ಮತ್ತು ಕೊರಲೆ ಬ್ರೆಡ್, ಸಿರಿಧಾನ್ಯದ ಕ್ಯಾರೆಟ್ ಕಪ್ ಕೇಕ್, ಫ್ರುಟ್ ಕಪ್ ಕೇಕ್, ಜೇನುತುಪ್ಪ ಆಧಾರಿತ ಬೇಕರಿ ತಿನಿಸುಗಳು ಸೇರಿದಂತೆ ಪೌಷ್ಟಿಕದಾಯಕ ಬೇಕರಿ ತಿನಿಸುಗಳ ಮಾರಾಟ ನಡೆಯಿತು.