ಕರ್ನಾಟಕ

karnataka

ETV Bharat / state

ಕೆಆರ್‌ಎಸ್ ಒಳಹರಿವು ಶೂನ್ಯಕ್ಕೆ ತಲುಪಿದ್ದು, ನೀರು ಬಿಡುವ ಶಕ್ತಿ ನಮ್ಮಲ್ಲಿಲ್ಲ: ಡಿ‌.ಕೆ.ಶಿವಕುಮಾರ್

ಕಾವೇರಿ ಕೊಳ್ಳದಲ್ಲಿ 51 ಟಿಎಂಸಿ ಮಾತ್ರ ನೀರಿದ್ದು, ಮತ್ತೆ ತಮಿಳುನಾಡಿಗೆ ನೀರು ಬಿಡುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂದು ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

DCM D K Shivakumar
ಡಿಸಿಎಂ ಡಿ ಕೆ ಶಿವಕುಮಾರ್​

By ETV Bharat Karnataka Team

Published : Oct 30, 2023, 7:55 PM IST

ಡಿಸಿಎಂ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯೆ

ಬೆಂಗಳೂರು: ಕೆಆರ್‌ಎಸ್ ಒಳಹರಿವು ಶೂನ್ಯ ಮಟ್ಟ ತಲುಪಿದೆ. ನಮ್ಮ ಹತ್ತಿರ ತಮಿಳುನಾಡಿಗೆ ಹರಿಸಲು ನೀರಿಲ್ಲ. ನೀರು ಬಿಡುವ ಶಕ್ತಿಯೂ ನಮ್ಮಲ್ಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಗಿರಿನಗರದ ವೀರಭದ್ರನಗರದಲ್ಲಿ ಸಂಭವಿಸಿದ ಅಗ್ನಿ ಅನಾಹುತದಿಂದ ಬಸ್​ಗಳು ಸುಟ್ಟು ಹೋದ ಸ್ಥಳಕ್ಕೆ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಕುರಿತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಶಿಫಾರಸಿನ ಕುರಿತು ಪ್ರತಿಕ್ರಿಯಿಸಿ, "ಕೆಆರ್‌ಎಸ್‌ ಅಣೆಕಟ್ಟೆಗೆ ಕಾವೇರಿ ನೀರಿನ ಒಳಹರಿವು ಶೂನ್ಯಕ್ಕೆ ತಲುಪಿದೆ. ಕೆಆರ್‌ಎಸ್, ಕಬಿನಿಯಿಂದ ನೈಸರ್ಗಿಕವಾಗಿ 815 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. ರಾಜ್ಯದ ಕಾವೇರಿ ಕೊಳ್ಳದಲ್ಲಿ 51 ಟಿಎಂಸಿ ನೀರು ಮಾತ್ರ ಲಭ್ಯವಿದೆ" ಎಂದರು.

"ಕುಡಿಯುವ ನೀರು ಉಳಿಸಿಕೊಳ್ಳಬೇಕು. ದೇವರ ಮೊರೆ ಹೋಗೋಣ, ಮಳೆ ಬೀಳಲಿ, ನೀರು ಕೆಳಗಡೆಗೆ ಹರಿಯಲಿ. ಈಗ ನಮ್ಮ ಬಳಿಯಂತೂ ನೀರಿಲ್ಲ. ಕಾವೇರಿ ನೀರಿನ ವಿಚಾರವಾಗಿ 89ನೇ ಸಭೆ ನಡೆಸಿದ ಕಾವೇರಿ ನೀರು ನಿಯಂತ್ರಣ ಸಮಿತಿಯು, ನ.1 ರಿಂದ ಮುಂದಿನ 15 ದಿನಗಳ ಕಾಲ 2,600 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ಶಿಫಾರಸು ಮಾಡಿದೆ" ಎಂದು ಹೇಳಿದರು.

ಅಗ್ನಿ ದುರಂತದಲ್ಲಿ ಪ್ರಾಣಹಾನಿ ಸಂಭವಿಸಿಲ್ಲ:ಬಸ್ ಅಗ್ನಿ ದುರಂತದ ಬಗ್ಗೆ ಮಾತನಾಡುತ್ತಾ, "ವೆಲ್ಡಿಂಗ್ ಮಾಡುವಾಗ ಕಿಡಿ ಹಾರಿ ಒಂದು ಬಸ್‌ಗೆ ಬೆಂಕಿ ಬಿದ್ದು, ಹರಡಿಕೊಂಡಿದೆ. ಇಷ್ಟು ದೊಡ್ಡ ಅನಾಹುತ ನಡೆದರೂ ಯಾವುದೇ ಪ್ರಾಣಹಾನಿ ಸಂಭವಿಸದೇ ಇರುವುದು ಒಳ್ಳೆಯ ಸುದ್ದಿ. ಅಗ್ನಿಶಾಮಕ ದಳದವರು ಅತ್ಯಂತ ಶೀಘ್ರವಾಗಿ ಬೆಂಕಿ ನಂದಿಸಿದ್ದಾರೆ. ಪೊಲೀಸ್ ಮತ್ತು ಅಗ್ನಿಶಾಮಕದಳದ ಉನ್ನತ ಅಧಿಕಾರಿಗಳಿಗೆ ಈ ವಿಚಾರವಾಗಿ ಪ್ರತ್ಯೇಕ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ" ಎಂದು ತಿಳಿಸಿದರು.

"ದುರಂತ ನಡೆದ ಸ್ಥಳ ಖಾಸಗಿಯವರಿಗೆ ಸೇರಿದೆ. ಅವರು ಸಹ ಸಣ್ಣ ಪ್ರಮಾಣದ ಅಗ್ನಿ ನಿಯಂತ್ರಣ ವ್ಯವಸ್ಥೆ ಇಟ್ಟುಕೊಂಡಿದ್ದಾರೆ. ಆದರೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದೇನೆ‌. ಇಂತಹ ಸೂಕ್ಷ್ಮ ಕೆಲಸಗಳು ನಡೆಯುವ ಜಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದೇನೆ" ಎಂದರು.

ಹೊರಹೋಗಲು ಒಂದೇ ಕಡೆ ಜಾಗ ಇದ್ದ ಕಾರಣ ಮತ್ತು ಮುಂಜಾಗ್ರತಾ ಕ್ರಮಗಳಿಲ್ಲದ ಕಾರಣ ಅನಾಹುತ ಸಂಭವಿಸಿತೇ ಎನ್ನುವ ಪ್ರಶ್ನೆಗೆ, "ತಾಂತ್ರಿಕ ಅಂಶ,‌ ದೋಷಗಳನ್ನು ನಾನು ಈಗಲೇ ಹೇಳಲು ಆಗುವುದಿಲ್ಲ. ವರದಿ ಬರಲಿ ಆ ನಂತರ ಹೇಳುತ್ತೇನೆ" ಎಂದು ತಿಳಿಸಿದರು.

ಈಗಾಗಲೇ ಮೂರು ದೊಡ್ಡ ಬೆಂಕಿ ಅವಘಡಗಳು ನಡೆದಿವೆ, ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲವೇ ಎಂದು ಕೇಳಿದಾಗ, "ಪಟಾಕಿ ದುರಂತ ನಡೆದ ನಂತರ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ಇಂತಹ ಸೂಕ್ಷ್ಮ ವಲಯಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ" ಎಂದರು. ಮಾಲೀಕನ ಮೇಲೆ ಎಫ್‌ಐಆರ್ ದಾಖಲಾಗುತ್ತದೆಯೇ ಎಂದು ಕೇಳಿದಾಗ, "ಎಷ್ಟು ಹಾನಿಯಾಗಿದೆ ಎಂದು ಇನ್ನೂ ಗೊತ್ತಿಲ್ಲ, ಮೊದಲು ವರದಿ ಬರಲಿ, ಆ ನಂತರ ಕ್ರಮ ತೆಗೆದುಕೊಳ್ಳೋಣ" ಎಂದರು.

ಇದನ್ನೂ ಓದಿ:ಬೆಂಗಳೂರು: ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ, 18 ಬಸ್‌ಗಳು ಬೆಂಕಿಗೆ ಆಹುತಿ

ABOUT THE AUTHOR

...view details