ಬೆಂಗಳೂರು: ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಮಾಲೂರು ಕೃಷ್ಣಯ್ಯ ಶೆಟ್ಟಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಗಾಂಧಿ ನಗರದ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಲು ಮುಂದಾಗಿದೆ. ಇಂದು ಗಾಂಧಿನಗರದ ಬಿಬಿಎಂಪಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ ಬಳಿಕ ಮಾತನಾಡಿದ, ಕೃಷ್ಣಯ್ಯ ಶೆಟ್ಟಿ, ಕೊನೆ ಕ್ಷಣದವರೆಗೆ ತಮಗೆ ಟಿಕೆಟ್ ದೊರೆಯುವ ಭರವಸೆ ಇತ್ತು. ಪಕ್ಷ ನಡೆಸಿದ ಸಮೀಕ್ಷೆಯಲ್ಲಿ ತಮಗೆ ಹೆಚ್ಚಿನ ಮತಗಳು ಬಂದಿದ್ದು, ಕಾರ್ಯಕರ್ತರು ಮತ್ತು ಮತದಾರರ ಒಲವು ಶೇ 95 ಕ್ಕೂ ಹೆಚ್ಚು ಲಭಿಸಿದೆ ಎಂದು ಹೇಳಿದರು.
ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬ ಸಮಿಕ್ಷಾ ವರದಿಗಳು ದೊರೆತಿವೆ. ಆದರೆ ಕಾರ್ಯಕರ್ತರು ಸ್ಪರ್ಧಿಸುವಂತೆ ಒತ್ತಡ ಹೆಚ್ಚಿತ್ತು. ಕಾರ್ಯಕರ್ತರ ಒತ್ತಾಸೆಯಿಂದ ಕಣಕ್ಕಿಳಿದಿದ್ದೇನೆ. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ತಾವು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಆದರೆ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಮಾಜಿ ಶಾಸಕ ಪಿ.ಎಸ್. ಪ್ರಕಾಶ್ ಉಪಸ್ಥಿತರಿದ್ದರು.
ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಎಸ್ ಆರ್ ವಿಶ್ವನಾಥ್ ಇಂದು ನಾಮಪತ್ರ ಸಲ್ಲಿಸಿದರು. ಬೆಳಗ್ಗೆ 9 ಗಂಟೆಯಿಂದಲೂ ಯಲಹಂಕದಲ್ಲಿ 20 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಷೋ ನಡೆಸಿ. ಮಧ್ಯಾಹ್ನ12 ಗಂಟೆಗೆ ತಾಲೂಕು ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿಗಳಿಗೆ ಉಮೇದುವಾರಿಕೆ ಸಲ್ಲಿಸಿದರು.
ಇನ್ನೂ ನಾಮಪತ್ರ ಸಲ್ಲಿಸಿ ಮಾತನಾಡಿದ ಎಸ್ ಆರ್ ವಿಶ್ವನಾಥ್, ನಾನು ಇದೇ ಕ್ಷೇತ್ರದವನು, ಹೊರಗಿನವನಲ್ಲ. ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ಬಂದು ಬೆಂಬಲ ಕೊಟ್ಟಿದ್ದಾರೆ ಈ ಸಲ 1ಲಕ್ಷ ಮತಗಳ ಅಂತರದಿಂದ ಗೆಲ್ಲಬೇಕು ಎನ್ನೋದು ನಮ್ಮ ಗುರಿ ಎಂದರು. ಇಲ್ಲಿ ಭಯದ ವಾತಾವರಣ ಇದೆ ಎನ್ನುವ ವಿರೋಧಿಗಳ ಹೇಳಿಕೆ ವಿಚಾರಕ್ಕೆ ಅವರೇ ಭಯದ ವಾತಾವರಣ ಮೂಡಿಸುತ್ತಾ ಇದ್ದಾರೆ. ಅವರ ಜೊತೆಯಲ್ಲಿ ಇರೋರು ರೌಡಿ ಶೀಟರ್ಗಳು. ಅವರು ಸೋಲಿನ ಭಯದಿಂದ ಈ ಆರೋಪ ಮಾಡ್ತಿದ್ದಾರೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.