ಬೆಂಗಳೂರು:ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇಗೌಡ ರಾಚೇನಹಳ್ಳಿ ಕೆರೆ ಪಕ್ಕದ ಬಯಲು ವ್ಯಾಯಾಮ ಶಾಲೆಗೆ ತೆರಳಿ ಅಲ್ಲಿದ್ದ ಜನರಿಗೆ ಹೆಲ್ತ್ ಮತ್ತು ಫಿಟ್ನೆಸ್ ವಿಚಾರವಾಗಿ ಸಲಹೆ, ಸೂಚನೆ ನೀಡಿದರು.
ಬ್ಯಾಟರಾಯನಪುರ ಕ್ಷೇತ್ರದ ಕೆರೆ ಪಕ್ಕದ ವಾಕಿಂಗ್ ಟ್ರ್ಯಾಕ್ ಹಾಗೂ ಜಿಮ್ಗಳಲ್ಲಿ ವ್ಯಾಯಾಮ ಮಾಡುತ್ತಿದ್ದ ಸಾರ್ವಜನಿಕರೊಂದಿಗೆ ಚರ್ಚಿಸಿದ ಅವರು, ಸಕ್ರಿಯ ಜೀವನ ಶೈಲಿ, ಗುಣಮಟ್ಟದ ಆಹಾರ ಮತ್ತು ಸುಸ್ಥಿರ ಪರಿಸರ ಒಂದಕ್ಕೊಂದು ಬೆಸೆದುಕೊಂಡಿವೆ. ಹೀಗಾಗಿ ಈ ಮೂರು ವಿಚಾರಗಳಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಬೇಕಿದೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಹೆಚ್ಚಿನ ತಿಳುವಳಿಕೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ತಮ್ಮ ಆರೋಗ್ಯದ ಗುಟ್ಟನ್ನೂ ಬಹಿರಂಗಪಡಿಸಿದ ಕೃಷ್ಣಭೈರೇಗೌಡರು, ತಾವಿಷ್ಟು ಆರೋಗ್ಯವಾಗಿರಲು ವ್ಯಾಯಾಮವೇ ಕಾರಣ. ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ತಮಗೆ ಒತ್ತಡ ಸಹಜವಾಗಿಯೇ ಹೆಚ್ಚಿರುತ್ತದೆ. ಈ ಒತ್ತಡ ನಿವಾರಿಸಿಕೊಳ್ಳಲು ನಿತ್ಯವೂ ವಾಕಿಂಗ್, ಯೋಗ ಮತ್ತಿತರ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ವಾರಕ್ಕೆ ಕನಿಷ್ಠ ಐದು ದಿನವಾದರೂ ವ್ಯಾಯಾಮ ಮಾಡುತ್ತೇನೆ. ಊಟಕ್ಕೆ ಮುದ್ದೆ, ಸೊಪ್ಪು, ತರಕಾರಿಗಳನ್ನು ಬಳಸುತ್ತೇನೆ. ಹೀಗಾಗಿಯೇ ಹಲವು ವರ್ಷಗಳಿಂದ ಶಾಸಕನಾಗಿ, ಸಚಿವನಾಗಿ ಬಿಡುವಿಲ್ಲದ ಕೆಲಸಗಳ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದರು.
ಸಿರಿಧಾನ್ಯ ಬಳಸಿ:
ಜನರು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ನಗರ ಪ್ರದೇಶದ ಜನರಲ್ಲಿ ಆರೋಗ್ಯದ ಮೇಲೆ ಕಾಳಜಿ ಹೆಚ್ಚುತ್ತಿದೆ. ಸಿರಿಧಾನ್ಯ (ಮಿಲ್ಲೆಟ್ಸ್) ಹಾಗೂ ಸಾವಯವ ಆಹಾರದ (ಆರ್ಗಾನಿಕ್ ಫುಡ್) ಮತ್ತು ಪ್ರಕೃತಿ ಸಹಜ ಆಹಾರ ಪದ್ಧತಿ ಅಳವಡಿಸಿಕೊಳ್ಳಿ. ಇದರಿಂದ ಕೃಷಿ ವೆಚ್ಚ ಇಳಿಕೆಯಾಗಿ ರೈತರಿಗೆ ಸಾಕಷ್ಟು ಲಾಭ ಸಿಗಲಿದೆ ಎಂದರು.