ಬೆಂಗಳೂರು :ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್ಸ್ ಪೆಕ್ಟರ್ಗಳ ವರ್ಗಾವಣೆಯ ಅವಧಿಯನ್ನು ಒಂದು ವರ್ಷದ ಬದಲಾಗಿ 2 ವರ್ಷಕ್ಕೆ ಹೆಚ್ಚಿಸುವ ಮನವಿಯನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಶೀಲಿಸುತ್ತಿದ್ದು, ಕ್ರಮವಹಿಸಲಿದೆ. ಪೊಲೀಸ್ ಸಿಬ್ಬಂದಿಗಳ ಪತಿ-ಪತ್ನಿ ಪ್ರಕರಣಗಳಲ್ಲಿ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಗುರುವಾರ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಗೃಹ ಸಚಿವರ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೇವೆ ಸಲ್ಲಿಸುವ ಸ್ಥಳದಲ್ಲಿ ಒಂದು ವರ್ಷದ ಸೇವಾ ಅವಕಾಶವನ್ನು ನೀಡಲಾಗಿದೆ. ಅಪರಾಧ ಪ್ರಕರಣಗಳ ಪತ್ತೆ ಹಾಗೂ ಅಪರಾಧಿಗಳನ್ನು ಗುರುತಿಸಿ ಕ್ರಮವಹಿಸುವಲ್ಲಿ ಈ ಒಂದು ವರ್ಷ ಸಿಬ್ಬಂದಿಗಳಿಗೆ ಸಾಕಾಗುವುದಿಲ್ಲ. ಅವರ ಪರಿಣಾಮಕಾರಿ ಕರ್ತವ್ಯಕ್ಕೆ ಅನುಕೂಲವಾಗಲು ಕನಿಷ್ಠ ಎರಡು ವರ್ಷಗಳವರೆಗೆ ವರ್ಗಾವಣೆಯಿಂದ ವಿನಾಯಿತಿ ನೀಡಬೇಕು. ಈ ಕುರಿತು ಪೊಲೀಸ್ ಇಲಾಖೆ ನಿಯಮಗಳಿಗೆ ತಿದ್ದುಪಡಿ ತರಬೇಕೆಂದು ಆಗ್ರಹಿಸಿದರು.
ಹುಬ್ಬಳ್ಳಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆ, ಆರ್ಥಿಕ ಇಲಾಖೆಗೆ ಪ್ರಸ್ತಾವನೆ :ಕಳೆದ ಸರ್ಕಾರದ ಅವಧಿಯಲ್ಲಿ ಹುಬ್ಬಳ್ಳಿಗೆ ಮಂಜೂರಾಗಿದ್ದ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ಬೆಳಗಾವಿಗೆ ವರ್ಗಾಯಿಸಲಾಗಿದೆ. ಶಾಸಕರ ಒತ್ತಾಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲೂ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆ ಕುರಿತು ಹೊಸದಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಆರ್ ಪಾಟೀಲ್ ಅವರು ಪ್ರಶ್ನೋತ್ತರ ವೇಳೆ ತಿಳಿಸಿದರು.