ಬೆಂಗಳೂರು :ಕೃಷ್ಣಾ ಮೇಲ್ದಂಡೆ ಯೋಜನೆಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಬೇರೊಂದು ಪೀಠಕ್ಕೆ ಅರ್ಜಿ ವರ್ಗಾಯಿಸುವ ಕುರಿತು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಮನವಿ ಮಾಡಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿದ್ದ ನ್ಯಾ.ಚಂದ್ರಚೂಡ್ ಮತ್ತು ನ್ಯಾ.ಎ.ಎಸ್.ಬೋಪಣ್ಣ ಜನವರಿ 10 ರಂದು ವಿಚಾರಣೆಯಿಂದ ಹಿಂದೆ ಸರಿದಿದ್ದು, ಈ ಕುರಿತು ಸಿಎಂ ನೇತೃತ್ವದಲ್ಲಿ ನಡೆದ ಕಾನೂನು ತಜ್ಞರು, ಹಿರಿಯ ವಕೀಲರ ಸಭೆಯಲ್ಲಿ ಮಹತ್ವದ ಸಮಾಲೋಚನೆ ನಡೆಸಲಾಯಿತು.
ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದ ಕಾರಣ ವಿಚಾರಣೆ ವಿಳಂಭವಾಗುವ ಆತಂಕ ಎದುರಾಗಿದೆ. ಹೊಸ ಪೀಠಕ್ಕೆ ಅರ್ಜಿ ವರ್ಗಾವಣೆಯಾಗಿ ನಂತರ ವಿಚಾರಣೆಗೆ ಬರಬೇಕಿದೆ. ಹಾಗಾಗಿ, ಬೇರೊಂದು ಪೀಠಕ್ಕೆ ಅರ್ಜಿ ವರ್ಗಾವಣೆಯಾಗುವಂತೆ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಆ ನಿಟ್ಟಿನಲ್ಲಿ ಈಗ ಹೆಜ್ಜೆ ಇರಿಸಬೇಕು ಎಂದು ನಿರ್ಧರಿಸಲಾಗಿದೆ.
ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲರ ಮೂಲಕ ರಾಜ್ಯದ ಅಹವಾಲನ್ನು ರಿಜಿಸ್ಟ್ರಾರ್ ಮೂಲಕ ಸುಪ್ರೀಂಕೋರ್ಟ್ ಗಮನಕ್ಕೆ ತರಬೇಕು, ಆ ಮೂಲಕ ಕೃಷ್ಣಾ ಮೇಲ್ದಂಡೆ ಕುರಿತ ಅರ್ಜಿಯನ್ನು ಬೇರೊಂದು ಪೀಠಕ್ಕೆ ಕೂಡಲೇ ವರ್ಗಾಯಿಸಿ ಆದಷ್ಟು ಬೇಗ ಅರ್ಜಿ ವಿಚಾರಣೆ ಆರಂಭವಾಗುವಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು.