ಬೆಂಗಳೂರು: ಕೆಆರ್ ಪುರಂ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ಕಣದಲ್ಲಿ 13 ಅಭ್ಯರ್ಥಿಗಳಿದ್ದಾರೆ. ಅಖಾಡದಲ್ಲಿರುವ ಉಮೇದುವಾರರು ಮನೆ ಮನೆಗೆ ತೆರಳಿ ಅಂತಿಮ ಹಂತದ ಕಸರತ್ತು ನಡೆಸಿದ್ದಾರೆ.
ನಾಳೆ ಕೆ.ಆರ್.ಪುರಂ ಬೈ ಎಲೆಕ್ಷನ್, ಸಿದ್ಧತೆ ಹೇಗಿದೆ..?
ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಕೆ.ಆರ್ ಪುರಂ ಕ್ಷೇತ್ರದಲ್ಲಿ ಈವರೆಗೂ 6,89,907 ಲಕ್ಷ ಮೌಲ್ಯದ 2,599 ಲೀಟರ್ ಲಿಕ್ಕರ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಇಲ್ಲಿಯವರೆಗೂ ಯಾವುದೇ ನಗದು ಅಥವಾ ವಾಹನ ಸೀಜ್ ಆಗಿಲ್ಲ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ ಮತದಾನ ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸಲು ಬಿಬಿಎಂಪಿ, ನಗರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಲ್ಲ ರೀತಿಯ ತಯಾರಿ ನಡೆಸಿಕೊಂಡಿವೆ. ಚುನಾವಣೆಯಲ್ಲಿ ಬಿಜೆಪಿಯಿಂದ ಬೈರತಿ ಬಸವರಾಜ್, ಜೆಡಿಎಸ್ನಿಂದ ಕೃಷ್ಣಮೂರ್ತಿ ಹಾಗೂ ಎಂ. ನಾರಾಯಣಸ್ವಾಮಿ ಘಟಾನುಘಟಿಗಳ ನಡುವೆ ಕದನ ಏರ್ಪಟ್ಟಿದೆ. ಕೆಆರ್ ಪುರಂ ಒಟ್ಟು ಮತದಾರರ ಸಂಖ್ಯೆ 4,87,857, ಇದರಲ್ಲಿ ಪುರುಷರು 2,55,465 ಮಹಿಳೆಯರು 2,32,228 ಹಾಗೂ ಇತರ 164 ಮಂದಿ ಇದ್ದಾರೆ. 6,580 ಮಂದಿ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುತ್ತಿದ್ದು, 138 ವಿಶೇಷಚೇತನ ಮತದಾರರು ಸಹ ಇದ್ದಾರೆ.
ಕೆ.ಆರ್ ಪುರಂ ಕ್ಷೇತ್ರದಲ್ಲಿ 437 ಒಟ್ಟು ಮತಗಟ್ಟೆಳಿದ್ದು, 5 ಸಖಿ ಮತಗಟ್ಟೆ ಹಾಗೂ 1 ಮಾದರಿ ಮತಗಟ್ಟೆ ಇದೆ. ಮತಎಣಿಕೆ ಕೇಂದ್ರವು ಸೆಂಟ್ ಜೋಸೆಫ್ ಇಂಡಿಯಾ ಹೈಸ್ಕೂಲ್ನಲ್ಲಿ ನಡೆಯಲಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮತಗಟ್ಟೆಗಳಲ್ಲಿ 1923 ಪೊಲೀಸರನ್ನು ನಿಯೋಜಿಸಿಲಾಗಿದೆ. ಈ ಪೈಕಿ 1056 ರಾಜ್ಯ ಪೊಲೀಸರು, 58 ಮೈಕೊ ಅಬ್ಸರ್ವರ್ಸ್ , 300 ಸಿಆರ್ ಪಿಎಫ್ ಪಡೆ ನಿಯೋಜಿಸಲಾಗಿದೆ.