ಬೆಂಗಳೂರು :ಕೆಆರ್‌ಪುರ ಠಾಣೆ ವ್ಯಾಪ್ತಿಯ ಭಟ್ಟರಹಳ್ಳಿ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂನನ್ನು ದುಷ್ಕರ್ಮಿಗಳು ಒಡೆದು 8 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ನಡೆದಿದೆ. ಗುರುವಾರ ಸಂಜೆ 8 ಲಕ್ಷ ರೂಪಾಯಿಯನ್ನು ಎಟಿಎಂಗೆ ಹಾಕಲಾಗಿದೆ.
ಅದರಲ್ಲಿ ಎಷ್ಟು ಹಣ ಡ್ರಾ ಆಗಿದೆ, ಎಷ್ಟು ಉಳಿದಿತ್ತು ಎಂಬುದು ಇನ್ನೂ ನಿಖರವಾಗಿ ತಿಳಿದಿಲ್ಲ. ಕಳ್ಳರು ಇಂದು ಬೆಳಗಿನ ಜಾವ 2:30ರಿಂದ 3ಗಂಟೆ ಸಮಯದಲ್ಲಿ ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ.
ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಕಳ್ಳತನ ಈ ಎಟಿಎಂ ಬಳಿ ಸಿಸಿ ಕ್ಯಾಮೆರಾ ಇಲ್ಲ, ಸೆಕ್ಯೂರಿಟಿ ಕೂಡ ಇರಲಿಲ್ಲ. ಬರ್ಗಲರಿ ಅಲರಾಂ ಇಲ್ಲದಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ದುಷ್ಕರ್ಮಿಗಳು ತಮ್ಮ ಕೈಚಳಕ ತೋರಿದ್ದಾರೆ. ಎಟಿಎಂನನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ಅದರಲ್ಲಿದ್ದ ಹಣದ ಸಮೇತ ಖದೀಮರು ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ಸಾರ್ವಜನಿಕರೊಬ್ಬರು ಹಣ ಪಡೆಯಲು ಎಟಿಎಂ ಘಟಕಕ್ಕೆ ಹೋದಾಗ ವಿಷಯ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಈ ಎಟಿಎಂ ಆರಂಭವಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಎಸಿಪಿ ಮನೋಜ್, ಇನ್ಸ್‌ಪೆಕ್ಟರ್ ಅಂಬರೀಶ್ ಆಗಮಿಸಿ ಪರಿಶೀಲಿಸಿದ್ದಾರೆ.