ಬೆಂಗಳೂರು:ಪ್ರಧಾನಿ ಮೋದಿ ಉದ್ಘಾಟಿಸಿದ್ದ ಕೆ.ಆರ್.ಪುರ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ನಡುವಿನ ಮೆಟ್ರೋ ಕಾರ್ಯಾಚರಣೆ ಭಾನುವಾರದಿಂದ ಆರಂಭವಾಗಲಿದೆ. ಈ ಸಂಬಂಧ ಬಿಎಂಆರ್ಸಿಎಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪ್ರಧಾನ ಮಂತ್ರಿ ಮೋದಿ ಶನಿವಾರ ಉದ್ಘಾಟಿಸಿದ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಕೃಷ್ಣರಾಜಪುರ ನಡುವಿನ ರೀಚ್-1 ವಿಸ್ತರಿಸಿದ ಮಾರ್ಗದ ವಾಣಿಜ್ಯ ಕಾರ್ಯಾಚರಣೆ ಭಾನುವಾರ ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಲಿದ್ದು, ಕೊನೆಯ ರೈಲು ಸೇವೆ ಎರಡೂ ಟರ್ಮಿನಲ್ಗಳಿಂದ ರಾತ್ರಿ 11 ಗಂಟೆಯವರೆಗೆ ಕಾರ್ಯಾಚರಿಸಲಿದೆ ಎಂದು ಮಾಹಿತಿ ನೀಡಿದೆ.
ಸೋಮವಾರದಿಂದ ವಾಣಿಜ್ಯ ಸೇವೆ ಕೃಷ್ಣರಾಜಪುರ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಲಭ್ಯ ವಿರುತ್ತದೆ. ಈ ಭಾಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರತ್ಯೇಕ ಟೋಕನ್‌ಗಳು, ಮೊಬೈಲ್ ಕ್ಯುಆರ್ ಟಿಕೆಟ್‌ಗಳನ್ನು ಖರೀದಿಸಿ ಪ್ರಯಾಣಿಸಬಹುದು. ಸ್ಮಾರ್ಟ್ ಕಾರ್ಡ್ ಹೊಂದಿರುವವರು ಕೂಡ ಪ್ರಯಾಣ ಮಾಡಬಹುದು ಎಂದು ತಿಳಿಸಿದೆ.
ರುಪೇ ಮೊಬಿಲಿಟಿ ಕಾರ್ಡ್ ಬಳಸಿ ಮೋದಿ ಪಯಣ:ಶನಿವಾರ ನಮ್ಮ ಮೆಟ್ರೋದ ಮೊದಲ ರೂಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC)ನ್ನು ಬಳಸಿ ಪ್ರಧಾನಮಂತ್ರಿ ಮೋದಿ ಮೆಟ್ರೋದಲ್ಲಿ ಪ್ರಯಾಣಿಸಿದರು. ಸಾರ್ವಜನಿಕರಿಗೆ ಮಾರ್ಚ್ 30 ರಿಂದ ಮೆಟ್ರೋ ನಿಲ್ದಾಣಗಳಲ್ಲಿ ಆರ್.ಬಿ.ಎಲ್ ಬ್ಯಾಂಕ್ ರೂಪೇ ಎನ್.ಸಿ.ಎಂ ಸಿ ಕಾರ್ಡ್‌ಗಳು ದೊರೆಯಲಿದೆ ಎಂದು ತಿಳಿಸಿದೆ.