ಬೆಂಗಳೂರು: ರಾಜಸ್ತಾನದಿಂದ ಗಾಂಜಾವನ್ನು ಅಕ್ರಮ ಸಾಗಾಣಿಕೆ ಮಾಡಿ ಮಾರಾಟ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಕೆ.ಆರ್ ಪುರಂ ಠಾಣೆ ಪೊಲೀಸರು ಬಂಧಿಸಿ, 500 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ರಾಜಸ್ತಾನದ ಜೋಧ್‍ಪುರ್ ಜಿಲ್ಲೆಯ ತಾಪೇಡ ಗ್ರಾಮದ ದಯಾಲ್‍ರಾಮ್, ಪೂನಾರಾಮ್ ಹಾಗು ಬುದ್ಧರಾಮ್ ಬಂಧಿತರು. ಇವರಿಂದ 1 ಕೋಟಿ ರೂ. ಮೌಲ್ಯದ ಗಾಂಜಾ ಮತ್ತು ಟ್ರಕ್ ವಶಪಡಿಸಿಕೊಳ್ಳಲಾಗಿದೆ. ಇವರು ರಾಜಸ್ತಾನ ನೋಂದಣಿಯ 10 ಚಕ್ರಗಳ ಟ್ರಕ್‍ನಲ್ಲಿ ದೇವನಹಳ್ಳಿಯಿಂದ ಹೊಸಕೋಟೆ-ಹಳೆ ಮದ್ರಾಸ್ ರಸ್ತೆ ಮೂಲಕ ಕೆ.ಆರ್ ಪುರದ ಮೇಡಹಳ್ಳಿ ಕಡೆಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಬರುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಹೀಗಿತ್ತು ಕಾರ್ಯಾಚರಣೆ?
ಆರೋಪಿಗಳು ನಂಬಿಕಸ್ಥರ ಬಿಟ್ಟು ಬೇರೆಯವರ ಜತೆ ಮಾತನಾಡುವುದಿಲ್ಲ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕಾರ್ಯತಂತ್ರ ರೂಪಿಸಿದ ಪೊಲೀಸರು, ಗ್ರಾಹಕರ ಸೋಗಿನಲ್ಲಿ ಆರೋಪಿಗಳ ಜತೆ ಮಾತುಕತೆ ನಡೆಸಿದ್ದರು. ಹಣ ನೋಡಿ ಖಚಿತಪಡಿಸಿಕೊಳ್ಳುತ್ತೇವೆಯೇ ಹೊರತು ನಿಮ್ಮೊಂದಿಗೆ ವ್ಯವಹಾರ ಮಾಡುವುದಿಲ್ಲ ಎಂದು ಆರೋಪಿಗಳು ಹೇಳಿದ್ದರು. ಹಾಗಾಗಿ ಹಣದ ಜತೆ ಟಿನ್‍ಫ್ಯಾಕ್ಟರಿ ಕಡೆ ಬರುವಂತೆ ಸೂಚನೆ ನೀಡಿದ್ದರು. ಸೂಟ್‍ಕೇಸ್‍ನಲ್ಲಿ ಹಣ ತೆಗೆದುಕೊಂಡು ಹೋಗಿ ಆರೋಪಿಗಳಿಗೆ ತೋರಿಸಿ ನಂಬಿಕೆ ಮೂಡಿಸಲಾಗಿತ್ತು. ನಂತರ ಆರೋಪಿಗಳು ಟ್ರಕ್‍ನೊಂದಿಗೆ ಮೇಡಹಳ್ಳಿಗೆ ಬಂದಿದ್ದಾರೆ.
ಸೂಟ್‍ಕೇಸ್‍ನಲ್ಲಿ ಹಣ ತೆಗೆದುಕೊಂಡು ಹೋಗಿ ಆರೋಪಿಗಳಿಗೆ ನಂಬಿಕೆ ಮೂಡಿಸಿದ ಪೊಲೀಸರು ಗಾಂಜಾ ಇಡಲು ಲಾರಿಯಲ್ಲಿ ಅಂಡರ್ಗ್ರೌಂಡ್ ವ್ಯವಸ್ಥೆ!
ಮೇಡಹಳ್ಳಿಗೆ ಬಂದ ವೇಳೆ ಸಾಕ್ಷಿದಾರರ ಸಮಕ್ಷಮದಲ್ಲಿ ದಾಳಿ ಮಾಡಿ ಲಾರಿಯನ್ನು ವಶಪಡಿಸಿಕೊಂಡು ಶೋಧನೆ ನಡೆಸಿದಾಗ ಮೊದಲಿಗೆ ಗಾಂಜಾ ಅಥವಾ ಮಾದಕ ವಸ್ತು ಸಿಕ್ಕಿರಲಿಲ್ಲ. ಕೂಲಂಕಶವಾಗಿ ವಿಚಾರಣೆ ನಡೆಸಿದಾಗ ಚಾಲಕನ ಕ್ಯಾಬಿನ್ ಹಿಂಭಾಗದಲ್ಲಿ ಅಂಡರ್ಗ್ರೌಂಡ್ ಮಾದರಿಯಲ್ಲಿ ವ್ಯವಸ್ಥಿತವಾದ ಕ್ಯಾಬಿನ್ ಮಾಡಿ ಗಾಂಜಾವನ್ನು ಅಡಗಿಸಿಟ್ಟಿದ್ದರು. 500 ಕೆಜಿ ಗಾಂಜಾ ಹಾಗೂ ಟ್ರಕ್ ಅನ್ನು ಪೊಲೀಸರು ವಶಪಡಿಸಿಕೊಂಡು ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಅನಂತ್ ಕುಮಾರ್, ಪರಿಕ್ಕರ್ ಕುಟುಂಬಕ್ಕೆ ಸಿಗದ ಬಿಜೆಪಿ ಟಿಕೆಟ್: ಅಂಗಡಿ ಕುಟುಂಬಕ್ಕೆ ಸಿಕ್ಕಿದ್ದು ಹೇಗೆ?