ಬೆಂಗಳೂರು: ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಗೆ ತೆರೆಯಲು ಅವಕಾಶ ಕೊಡುವಂತೆ ವ್ಯಾಪಾರಸ್ಥರು ಹಾಗೂ ರೈತರು ಪ್ರತಿಭಟನೆ ನಡೆಸಿದರು.
ಕಾಲ್ನಡಿಗೆ ಮೂಲಕ ರೈತರು- ವ್ಯಾಪಾರಿಗಳಪ್ರತಿಭಟನೆ ವ್ಯಾಪಾರಸ್ಥರ ಜೊತೆ ಹಲವು ಸಂಘ ಸಂಸ್ಥೆಗಳು ಸೇರಿ ಕೆ. ಆರ್. ಮಾರುಕಟ್ಟೆ ಸರ್ಕಲ್ನಿಂದ ಬಿಬಿಎಂಪಿ ಕಚೇರಿವರೆಗೂ ಕಾಲ್ನಡಿಗೆಯಲ್ಲಿ ಬಂದು ಪ್ರತಿಭಟನೆ ನಡೆಸಿದರು. 200ಕ್ಕೂ ಹೆಚ್ಚು ರೈತರು ಹಾಗೂ ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೊರೊನಾ ಹಿನ್ನೆಲೆ ಕಳೆದ 4 ತಿಂಗಳಿಂದ ಕೆ.ಆರ್ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಬಂದ್ ಆಗಿವೆ. ಈಗ ಸರ್ಕಾರ ಹಾಗೂ ಬಿಬಿಎಂಪಿ ಮಾರುಕಟ್ಟೆ ತೆರೆಯಲು ಅನುಮತಿ ನೀಡದಿದ್ರೆ ಸ್ವಯಂ ನಿರ್ಧಾರ ತೆಗೆದುಕೊಂಡು ನಾಳೆಯಿಂದಲೇ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಮುಂದಾಗುತ್ತೇವೆ ಎಂದರು.
ಕೊರೊನಾ ಲಾಕ್ಡೌನ್ ಅನ್ಲಾಕ್ ಆಗಿದ್ದರೂ ಮಾರುಕಟ್ಟೆಗಳಿಗೆ ಮುಕ್ತಿ ಸಿಕ್ಕಿಲ್ಲ, ಇದರಿಂದ ಮಾರಾಟಗಾರರು ಕಷ್ಟ- ನಷ್ಟ ಅನುಭವಿಸಬೇಕಾಗಿದೆ. ಬೆಂಗಳೂರು ಸುತ್ತಮುತ್ತಲಿನ ರೈತರಿಗೂ ಪೂರ್ಣ ಪ್ರಮಾಣದಲ್ಲಿ ನಷ್ಟವಾಗಿದೆ. ಬೆಳೆದ ಬೆಳೆ ಅರ್ಧ ಬೆಲೆಗೆ ಮಾರುವಂತಹ ಸ್ಥಿತಿ ಬಂದಿದೆ ಎಂದು ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರೈತರು ರಸ್ತೆ - ರಸ್ತೆಯಲ್ಲಿ ತರಕಾರಿ, ಸೊಪ್ಪು ಮಾರಾಟ ಮಾಡ್ತಾ ಇದ್ದಾರೆ. ರೈತರಿಗೆ ಸರಿಯಾದ ಬೆಲೆ ಸಿಗಬೇಕಾದರೆ ಮಾರುಕಟ್ಟೆ ಓಪನ್ ಮಾಡಿ. ದಂಧೆಕೋರರ ರೀತಿ ಕೆಲಸ ಬೇಡ. ಸರ್ಕಾರ ಸೆಪ್ಟೆಂಬರ್ 1 ರ ನಂತರ ತೀರ್ಮಾನ ಎಂದರೆ ಸಿಎಂ ಮನೆ ಮುಂದೆ ಧರಣಿ ಮಾಡುತ್ತೇವೆ. ಇವತ್ತು ಮಾರುಕಟ್ಟೆ ಓಪನ್ ಮಾಡದಿದ್ದರೆ ನಾಳೆಯೇ ಸಿಎಂ ಮನೆ ಮುಂದೆ ಜೋಳಿಗೆ ಹಿಡಿದು ಪ್ರತಿಭಟಿಸುತ್ತೇವೆ. ರೈತರ ಮಕ್ಕಳಿಗೂ ಊಟ , ಓದಲು ಅವಕಾಶ ಕೊಡಿ. ಇಲ್ಲದಿದ್ದರೆ ರೈತರು, ಮಹಿಳೆಯರು ಸಿಎಂ ಮನೆ ಬಳಿಯೇ ಭಿಕ್ಷೆ ಕೇಳ್ತೇವೆ ಎಂದು ಆಕ್ರೋಶ ಹೊರಹಾಕಿದರು.