ಬೆಂಗಳೂರು: ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯ 31 ಜಿಲ್ಲೆಗಳಲ್ಲಿ ವಿದ್ಯುತ್ ಸಂಪರ್ಕ ಪಡೆದಿರುವ 3311436 ಕೃಷಿ ಪಂಪ್ಸೆಟ್ ಗಳಿವೆ. 2022-23 ನೇ ಸಾಲಿನಲ್ಲಿ 13262.68 ಮಿಲಿಯನ್ ಯೂನಿಟ್ ವಿದ್ಯುತ್ ಅನ್ನು ಸರಬರಾಜು ಮಾಡಿದ್ದು, ಅದಕ್ಕಾಗಿ 7965.44 ಕೋಟಿ ಸಹಾಯಧನವನ್ನು ಸರ್ಕಾರ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿ ಮಾಡಿದೆ. ಹಸಿರು ಇಂಧನಕ್ಕೆ ಆದ್ಯತೆ ನೀಡಿ ಹಸಿರು ವಿದ್ಯುತ್ ಪೂರೈಕೆಯನ್ನೂ ಕೈಗೆತ್ತಿಕೊಳ್ಳಲಾಗಿದೆ.
ಬೆಸ್ಕಾಂ ವಿಭಾಗ:ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ,ಚಿಕ್ಕಬಳ್ಳಾಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಸೇರಿ 8 ಜಿಲ್ಲೆಗಳಲ್ಲಿ 1006102 ಕೃಷಿ ಪಂಪ್ ಸೆಟ್ ಗಳಿವೆ.
ಮೆಸ್ಕಾಂದಲ್ಲಿ ವಿಭಾಗ:ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿ ಬರುವ ದಕ್ಷಿಣ ಕನ್ನಡ,ಉಡುಪಿ,ಶಿವಮೊಗ್ಗ, ಚಿಕ್ಕಮಗಳೂರು ಸೇರಿ ನಾಲ್ಕು ಜಿಲ್ಲೆಗಳಲ್ಲಿ 394092 ಕೃಷಿ ಪಂಪ್ ಸೆಟ್ ಗಳಿವೆ.
ಚೆಸ್ಕಾಂ ವಿಭಾಗ:ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯಾಪ್ತಿಯಲ್ಲಿ ಬರುವ ಮೈಸೂರು, ಚಾಮರಾಜನಗರ, ಕೊಡಗು,ಮಂಡ್ಯ,ಹಾಸನ ಸೇರಿ ಐದು ಜಿಲ್ಲೆಗಳಲ್ಲಿ 472394 ಕೃಷಿ ಪಂಪ್ ಸೆಟ್ ಗಳಿವೆ.
ಹೆಸ್ಕಾಂ ವಿಭಾಗ:ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಬರುವ ಧಾರವಾಡ,ಗದಗ,ಹಾವೇರಿ,ಉತ್ತರ ಕನ್ನಡ,ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿ 7 ಜಿಲ್ಲೆಗಳಲ್ಲಿ 1010968 ಕೃಷಿ ಪಂಪ್ ಸೆಟ್ ಗಳಿವೆ.
ಜೆಸ್ಕಾಂ ವಿಭಾಗ:ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಬರುವ ಬೀದರ್,ಕಲಬುರಗಿ, ಯಾದಗಿರಿ,ರಾಯಚೂರು, ಕೊಪ್ಪಳ,ಬಳ್ಳಾರಿ,ವಿಜಯನಗರ ಸೇರಿ 7 ಜಿಲ್ಲೆಗಳಲ್ಲಿ 427880 ಕೃಷಿ ಪಂಪ್ ಸೆಟ್ ಗಳಿವೆ.
31 ಜಿಲ್ಲೆಗಳಲ್ಲಿ 3311436 ಕೃಷಿ ಪಂಪ್ ಸೆಟ್: ಒಟ್ಟು ಐದು ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯ 31 ಜಿಲ್ಲೆಗಳಲ್ಲಿ 3311436 ಕೃಷಿ ಪಂಪ್ ಸೆಟ್ ಗಳಿವೆ. ಡಿಸೆಂಬರ್ ಅಂತ್ಯದವರೆಗೆ ಬೆಸ್ಕಾಂ ನಿಂದ 3905.93 ಮಿಲಿಯನ್ ಯೂನಿಟ್,ಸೆಸ್ಕ್ 1657.51 ಮಿಲಿಯನ್ ಯೂನಿಟ್, ಮೆಸ್ಕಾಂ ನಿಂದ 919.12 ಮಿಲಿಯನ್ ಯೂನಿಟ್, ಹೆಸ್ಕಾಂ ನಿಂದ 4434.29 ಮಿಲಿಯನ್ ಯೂನಿಟ್,ಜೆಸ್ಕಾಂ 2345.83 ಮಿಲಿಯನ್ ಯೂನಿಟ್ ಸೇರಿ ಐದು ವಿದ್ಯುತ್ ಸರಬರಾಜು ಕಂಪನಿಗಳಿಂದ 13262.68 ಮಿಲಿಯನ್ ಯೂನಿಟ್ ವಿದ್ಯುತ್ ಅನ್ನು ಸರಬರಾಜು ಮಾಡಲಾಗಿದೆ.
ಇಷ್ಟು ಕೃಷಿ ಪಂಪ್ ಸೆಟ್ ಗಳಿಗೆ 10 ಹೆಚ್.ಪಿ ವರೆಗೆ ಉಚಿತ ವಿದ್ಯುತ್ ಸರಬರಾಜು ಮಾಡಲು 7965.44 ಕೋಟಿ ರೂ.ಗಳ ಸಹಾಯಧನವನ್ನು 2022-23 ನೇ ಸಾಲಿನಲ್ಲಿ ಸರ್ಕಾರದಿಂದ ವಿದ್ಯುತ್ ಸರಬರಾಜು ಕಂಪನಿಗಳು ಪಡೆದಿವೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕೃಷಿ ಪಂಪ್ ಸೆಟ್ ಗಳಿಗೂ ಸೌರ ವಿದ್ಯುತ್:ಇನ್ನು ಕೇಂದ್ರ ಸರ್ಕಾರದ ಕುಸುಮ್ ಸಿ ಯೋಜನೆಯಡಿ ಫೀಡರ್ ಮಟ್ಟದ ಸೌರೀಕರಣ ಮೂಲಕ ರೈತರ ಪಂಪ್ ಸೆಟ್ ಗಳಿಗೆ ಸೌರ ಶಕ್ತಿಯಿಂದ ವಿದ್ಯುತ್ ಸರಬರಾಜು ಮಾಡಲು ರಾಜ್ಯದ 337331 ಕೃಷಿ ಪಂಪ್ ಸೆಟ್ ಗಳನ್ನು ಬೆಸ್ಕಾಂ,ಹೆಸ್ಕಾಂ,ಮೆಸ್ಕಾಂ ವ್ಯಾಪ್ತಿಯಲ್ಲಿ ಆಯ್ಕೆ ಮಾಡಿಕೊಂಡು ಸೌರ ವಿದ್ಯುತ್ ಪೂರೈಕೆ ಮಾಡುತ್ತಿದೆ.ಹಂತ ಹಂತವಾಗಿ ಇದನ್ನು ವಿಸ್ತರಿಸಲಾಗುತ್ತದೆ ಎಂದು ಇಂಧನ ಸಚಿವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಹಸಿರು ಇಂಧನ ಬಳಕೆಗೆ ಉತ್ತೇಜನ ಆರಂಭಗೊಂಡಿದ್ದು ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಕೇವಲ ದ್ವಿಚಕ್ರ ವಾಹನಗಳಿಗೆ ಮಾತ್ರವೇ ಸೀಮಿತ ಎನ್ನುವಂತಾಗಿದ್ದ ಇವಿ ಇದೀಗ ಕಾರುಗಳಿಗೆ ವಿಸ್ತರಣೆಗೊಂಡು ಇವಿ ಕಾರುಗಳ ಖರೀದಿ ಹೆಚ್ಚಾಗುತ್ತಿದೆ. ಇದರ ನಡುವೆ ಬಿಎಂಟಿಸಿ, ಕೆಎಸ್ಆರ್‌ಟಿಸಿ ಇವಿ ಬಸ್ ಗಳನ್ನೂ ರಸ್ತೆಗಿಳಿಸಿದೆ. ಇದೀಗ ಕೃಷಿ ಪಂಪ್ ಸೆಟ್ಗಳಿಗೆ ಸೌರ ವಿದ್ಯುತ್ ಮೂಲಕ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಾಗುತ್ತಿದೆ.
ಇದನ್ನೂಓದಿ:ಪುಣ್ಯಕೋಟಿ ಗೋ ದತ್ತು ಯೋಜನೆಗೆ ಇನ್ನೂ ಸಿಗದ ಜನಸ್ಪಂದನೆ: ಯೋಜನೆ ಮೇಲೆ ಶಾಸಕರಿಗೇ ಇಲ್ಲದ ಕಾಳಜಿ!