ಬೆಂಗಳೂರು: ಇಂದು ನಡೆಯಬೇಕಿದ್ದ ಎಫ್‌ಡಿಎ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಈಗಾಗಲೇ ಮುಂದೂಡಿಕೆ ಮಾಡಿ ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆ ಹೊರಡಿಸಿದೆ. ಈ ಸಂಬಂಧ ಸಿಸಿಬಿ ಪೊಲೀಸರು ಚಂದ್ರು, ರಾಚಪ್ಪ ಸೇರಿ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿ ಪ್ರಶ್ನೆ ಪತ್ರಿಕೆಗಳನ್ನು ಜಪ್ತಿ ಮಾಡಿದ್ದಾರೆ.
ಜ್ಞಾನ ಭಾರತಿ ಠಾಣೆಯಲ್ಲಿಟ್ಟು ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದ್ದು, ಒಟ್ಟು ಆರು ಆರೋಪಿಗಳನ್ನು ಇದುವರಗೆ ಬಂಧಿಸಲಾಗಿದೆ. ಪ್ರಮುಖ ಆರೋಪಿ ಚಂದ್ರು ಕೊರಮಂಗಲದ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ನೌಕರ ಎಂದು ಪ್ರಾಥಮಿಕ ಮಾಹಿತಿಯಿಂದ ಲಭ್ಯವಾಗಿದೆ.
ಸಿಸಿಬಿ ಪೊಲೀಸರಿಂದ ತನಿಖೆ ಚುರುಕುಗೊಂಡಿದ್ದು. ಆರೋಪಿಗಳ ಜೊತೆ ಲಿಂಕ್ನಲ್ಲಿದ್ದವರ ಪತ್ತೆಗೆ ಸಿಸಿಬಿ ಹುಡುಕಾಟ ನಡೆಸುತ್ತಿದೆ. ಕಾಲ್ ರೆಕಾರ್ಡ್ ಮೂಲಕ ಉಳಿದವರಿಗಾಗಿ ಶೋಧ ಮುಂದುವರೆದಿದೆ. ಆರೋಪಿಗಳ ಜೊತೆ ವಿವಿಧ ಹಂತಗಳಲ್ಲಿ ಹಲವು ಅಭ್ಯರ್ಥಿಗಳು ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.
ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ; 6 ಮಂದಿ ಬಂಧನ, ನಾಳೆ ನಡೆಯಬೇಕಿದ್ದ ಎಫ್‌ಡಿಎ ಪರೀಕ್ಷೆ ಮುಂದೂಡಿಕೆ
ಈ ಹಿನ್ನಲೆಯಲ್ಲಿ ಇನ್ನುಳಿದ ಆರೋಪಿಗಳು ಹಾಗೂ ಸಂಪರ್ಕದಲ್ಲಿದ್ದ ಅಭ್ಯರ್ಥಿಗಳಿಗಾಗಿ ಶೋಧ ಮುಂದುವರೆದಿದೆ. ಸೋರಿಕೆ ಸಂಬಂಧ ಸಿಸಿಬಿ ಲೋಕಸೇವಾ ಆಯೋಗಕ್ಕೆ ಮೊದಲು ಮಾಹಿತಿ ನೀಡಿ ನಂತರ ಆರೋಪಿಗಳ ಬಳಿ ಇದ್ದ ಪ್ರಶ್ನೆ ಪತ್ರಿಕೆಗಳನ್ನು ಪೊಲೀಸರು ಕೆಪಿಎಸ್ಸಿಗೆ ಕಳುಹಿಸಿ ಪರಿಶೀಲನೆ ನಡೆಸಿದ್ದರು. ಆಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಇಂದು ನಡೆಯಬೇಕಿದ್ದ ಪರೀಕ್ಷೆ ಪತ್ರಿಕೆಗಳು ಎನ್ನುವುದು ಖಚಿತವಾದಾಗ ಪರೀಕ್ಷೆ ರದ್ದುಗೊಳಿಸಿ ಆಯೋಗ ಆದೇಶ ಹೊರಡಿಸಿದೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧ ನಿನ್ನೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗಿತ್ತು. ಇಂದು ಬೆಳಗ್ಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನೆಡೆಯಲಿತ್ತು.ಈ ಸಂಬಂಧ ಸಿಸಿಬಿ ಪೊಲೀಸರು ಈಗ ಆರು ಜನ ಆರೋಪಿಗಳನ್ನು ಹೆಚ್ಚಿನ ವಿಚಾರಣಗೆ ಒಳಪಡಿಸಿದ್ದಾರೆ . 24 ಲಕ್ಷ ರೂ. ನಗದು ಮತ್ತು ಮೂರು ವಾಹನಗಳು ಈಗಾಗಲೇ ಆರೋಪಿಗಳಿಂದ ಜಪ್ತಿ ಮಾಡಲಾಗಿದೆ.