ಬೆಂಗಳೂರು :2011 ನೇ ಸಾಲಿನ 362 ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಕಾತಿ ಆದೇಶ ನೀಡಿರುವುದನ್ನು ಸಿಂಧುಗೊಳಿಸುವುದು ಮತ್ತು ಆಯ್ಕೆ ಪಟ್ಟಿಯನ್ನು ಕಾನೂನು ಬದ್ಧಗೊಳಿಸುವ ಉದ್ದೇಶದಿಂದ 2022ನೇ ಸಾಲಿನ ಕರ್ನಾಟಕ ಸಿವಿಲ್ ಸೇವೆಗಳ (2011 ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಇಂದು ಅಂಗೀಕಾರ ದೊರೆಯಿತು.
ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಕೆಪಿಎಸ್‍ಸಿ ಮೂಲಕ ನೇಮಕಗೊಂಡಿದ್ದ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಶೀಘ್ರವೇ ಕೈ ಸೇರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ವಿಧೇಯಕವನ್ನು ಮಂಡಿಸಿದರು.
ಬಳಿಕ ಮಾತನಾಡಿದ ಅವರು, 2011ರಲ್ಲಿ ಕೆಪಿಎಸ್‍ಸಿ ಮೂಲಕ ಗ್ರೂಪ್ ಎ, ಬಿ ಸೇರಿದಂತೆ ಒಟ್ಟು 362 ಹುದ್ದೆಗಳನ್ನು ನೇಮಕ ಮಾಡಲಾಗಿತ್ತು. ಆದರೆ ನೇಮಕಾತಿ ಸಂದರ್ಭದಲ್ಲಿ ಕೆಪಿಎಸ್‍ಸಿ ಸದಸ್ಯರು ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿ ಸಾಕಷ್ಟು ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಸರ್ಕಾರ ನೇಮಕಾತಿ ಆದೇಶವನ್ನು ಸಂಪೂರ್ಣವಾಗಿ ರದ್ದುಪಡಿಸಿ ಸಿಐಡಿ ತನಿಖೆಗೆ ಆದೇಶ ಮಾಡಿತ್ತು. ಸಿಐಡಿಯ ಮಧ್ಯಂತರ ವರದಿಯಲ್ಲಿ ಮೇಲ್ನೋಟಕ್ಕೆ ನೇಮಕಾತಿ ವೇಳೆ ಸಾಕಷ್ಟು ಅಕ್ರಮ ನಡೆದಿರುವುದು ಕಂಡುಬಂದಿದೆ. ಹೀಗಾಗಿ ನೇಮಕಾತಿ ಪ್ರಕ್ರಿಯೆಯನ್ನು ನಿಷ್ಕ್ರಿಯಗೊಳಿಸಬೇಕೆಂದು ಸೂಚಿಸಿತ್ತು.