ಕರ್ನಾಟಕ

karnataka

ಖಾಸಗಿ ಶಾಲೆಗಳಿಂದ ಶೇ.40 ಶುಲ್ಕ ಏರಿಕೆ ಖಂಡನೀಯ: ಶಶಿಕುಮಾರ್

By

Published : Apr 6, 2023, 6:23 PM IST

ಖಾಸಗಿ ಶಿಕ್ಷಣ ಸಂಸ್ಥೆಗಳು ಗಣನೀಯ ಪ್ರಮಾಣದಲ್ಲಿ ಶುಲ್ಕ ಏರಿಸುತ್ತಿರುವುದನ್ನು ತಿರಸ್ಕರಿಸುತ್ತೇವೆ ಎಂದು ಕೆಪಿಎಂಟಿಸಿಸಿ ಸಂಚಾಲಕ ಡಿ.ಶಶಿಕುಮಾರ್ ಹೇಳಿದರು.

KPMTCC Coordinator D. Sasikumar
ಕೆಪಿಎಂಟಿಸಿಸಿ ಸಂಚಾಲಕ ಡಿ. ಶಶಿಕುಮಾರ್

ಕೆಪಿಎಂಟಿಸಿಸಿ ಸಂಚಾಲಕ ಡಿ. ಶಶಿಕುಮಾರ್ ಹೇಳಿಕೆ

ಬೆಂಗಳೂರು : ರಾಜ್ಯದ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ವರ್ಷದಿಂದ ವರ್ಷಕ್ಕೆ ಶೇ.40ರವರೆಗೂ ಶುಲ್ಕ ಏರಿಕೆ ಮಾಡುತ್ತಿವೆ. ಇದು ಅತ್ಯಂತ ಖಂಡನೀಯ. ಸಾರಾಸಗಟಾಗಿ ಈ ನಡೆಯನ್ನು ತಿರಸ್ಕರಿಸುತ್ತೇವೆ ಎಂದು ರಾಜ್ಯ ಖಾಸಗಿ ಶಾಲಾ ವ್ಯವಸ್ಥಾಪನಾ, ಕಲಿಕಾ ಮತ್ತು ಬೋಧಕೇತರ ಸಿಬ್ಬಂದಿ, ಸಮನ್ವಯಕಾರರ ಸಮಿತಿ (ಕೆಪಿಎಂಟಿಸಿಸಿ) ಸಂಚಾಲಕ ಡಿ. ಶಶಿಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಸೆಂಚುರಿ ಕ್ಲಬ್​ನಲ್ಲಿಂದು ವಿವಿಧ ಸಮನ್ವಯ ಸಂಘಟನೆಗಳ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ಶೇ.10 ರಿಂದ ಶೇ.15ರಷ್ಟು ಮಾತ್ರ ಹೆಚ್ಚಿಸಲು ಅವಕಾಶವಿದೆ. ರಾಜ್ಯ ಸಂಘಟನೆಗಳು ಹಲವು ವರ್ಷ ಹೋರಾಟ ಮಾಡಿದ ಪ್ರತಿಫಲವಾಗಿ ಖಾಸಗಿ ಶಿಕ್ಷಣ ಸಂಸ್ಥೆ ಶುಲ್ಕ ನಿಗದಿಪಡಿಸುವುದು ಆಯಾ ಶಾಲೆಯ ಹಕ್ಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದನ್ನೇ ಉಪಯೋಗಿಸಿಕೊಂಡು ಸರ್ಕಾರಗಳು ತಮ್ಮ ಕೆಲ ಅವೈಜ್ಞಾನಿಕ ಆದೇಶಗಳ ಮೂಲಕ ಪರೋಕ್ಷವಾಗಿ ಇಷ್ಟೇ ಶುಲ್ಕ ನಿಗದಿಪಡಿಸಬೇಕೆಂದು ಸೂಚಿಸುತ್ತಿವೆ. ಇದನ್ನು ನಾವು ನ್ಯಾಯಾಲಯದ ಮೊರೆ ಹೋಗಿ ಸರ್ಕಅರದ ಆದೇಶಗಳನ್ನು ರದ್ದುಪಡಿಸುವಂತೆ ಮಾಡಿಕೊಂಡಿದ್ದೇವೆ. ಇದಾದ ಬಳಿಕ ಬಂದಿರುವ ತೀರ್ಪು ಆಧರಿಸಿ ವ್ಯಾಪಾರೀಕರಣದ ರೀತಿ ಶುಲ್ಕ ವಿಧಿಸದೇ, ಖರ್ಚು ವೆಚ್ಚ ನಿಗದಿಪಡಿಸಿ ಶುಲ್ಕ ನಿಗದಿಪಡಿಸುವಂತೆ ತಿಳಿಸಿದೆ ಎಂಬ ಮಾಹಿತಿ ನೀಡಿದರು.

ಸರ್ಕಾರ ಪಠ್ಯಪುಸ್ತಕಕ್ಕೆ ಸರ್ಕಾರದ ಶಿಕ್ಷಣ ಇಲಾಖೆ ಎರಡು ಬಾರಿ ಶುಲ್ಕ ಹೆಚ್ಚಳ ಮಾಡಿದೆ. ಶಿಕ್ಷಣ ಇಲಾಖೆ ತಮ್ಮ ಶುಲ್ಕವನ್ನು ಹೆಚ್ಚಿಸುತ್ತಲೇ ಇದ್ದು, ಅನಿಯಮಿತವಾಗಿ ಪಠ್ಯಪುಸ್ತಕಕ್ಕೆ ಶೇ.25ಕ್ಕಿಂತ ಹೆಚ್ಚು ಪ್ರಮಾಣದ ಹೆಚ್ಚಳ ಮಾಡಿದೆ. ಹಾಗಂತ ಖಾಸಗಿ ಶಿಕ್ಷಣ ಸಂಸ್ಥೆಗಳು ಮನಸೋ ಇಚ್ಛೆ ಹೆಚ್ಚಿಸಬೇಕೆಂದು ಇಲ್ಲ. ಶೇ.10 ರಿಂದ 15 ರಷ್ಟು ಮಾತ್ರ ಹೆಚ್ಚಳಕ್ಕೆ ಅವಕಾಶ ನೀಡಲಾಗಿತ್ತು. ಇದಕ್ಕೆ ನಾವು ಎಲ್ಲಾ ಸಂಘಟನೆಗಳೂ ಬದ್ಧವಾಗಿ ನಮ್ಮ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಿಗೆ ವಿವರಿಸಿದ್ದೇವೆ. ಒಂದು ಮಗು ಶಾಲೆಗೆ ಮೊದಲ ಬಾರಿಗೆ ಸೇರಿಸುವ ಸಂದರ್ಭ ಶುಲ್ಕ ನಿಗದಿಪಡಿಸಿಕೊಳ್ಳಲಿ. ತದನಂತರ ಶೇ.10 ರಿಂಧ 15ರಷ್ಟಕ್ಕಿಂತ ಹೆಚ್ಚಳ ಮಾಡಬಾರದು ಎನ್ನುವುದು ನಮ್ಮ ಆಗ್ರಹ ಎಂದು ಡಿ.ಶಶಿಕುಮಾರ್​ ಹೇಳಿದರು.

ಶುಲ್ಕ ನಿಗದಿ ಸಮಂಜಸವಾಗಿರಲಿ: ಕೆಲವೇ ಕೆಲವು ಖಾಸಗಿ ಶಾಲೆಗಳು ಶೇ.40ರಷ್ಟು ಶುಲ್ಕ ಹೆಚ್ಚಿಸಿದ್ದು, ಅದು ಮಾಧ್ಯಮಗಳಲ್ಲಿಯೂ ಪ್ರಕಟವಾಗಿದೆ. ನಾವು ಇಂದು ಯಾವುದೇ ಶಿಕ್ಷಣ ಸಂಸ್ಥೆಯ ಹೆಸರು ಬಳಸಲು ಇಚ್ಛಿಸುವುದಿಲ್ಲ. ಆದರೆ ಇಂತಹ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ಹೆಚ್ಚಾಗಿ ಹೋಯಿತು ಎನ್ನುವುದನ್ನು ಕೇಳಲು ಬಯಸುತ್ತೇವೆ. ಶಿಕ್ಷಣ ಸಂಸ್ಥೆಗಳೇ ನಮಗೆ ಮೊದಲ ಆದ್ಯತೆ. ಆದರೆ ಪಾಲಕ ಪೋಷಕರೂ ನಮ್ಮ ಅಂಗ. ಅವರಿದ್ದರೆ ಶಾಲೆ. ಶಾಲೆ ಇದ್ದರೆ ಶಿಕ್ಷಕರು. ಇದರಿಂದ ಶುಲ್ಕ ನಿಗದಿ ಸಮಂಜಸವಾಗಿರಬೇಕು ಎಂದರು.

ಶಿಕ್ಷಣ ಸಚಿವರಿಗೆ ಕನಿಷ್ಠ ಪ್ರಜ್ಞೆ ಇಲ್ಲ: ಈ ಸಂಬಂಧವಾಗಿಯೂ ಒಂದು ಕಾನೂನಾತ್ಮಕ ರೂಪುರೇಷೆ ಹೆಣೆಯುತ್ತೇವೆ. ಸ್ವಯಂ ನಿಯಂತ್ರಕವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಿದ್ದೇವೆ. ಇದರ ಮಧ್ಯೆ ಇಷ್ಟಾಗಿಯೂ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವರು ಕನಿಷ್ಠ ಪ್ರಜ್ಞೆ ಇಟ್ಟುಕೊಂಡು ಸಂಘಟನೆಗಳ ಮುಖಂಡರನ್ನು ಕರೆದು ಸೌಜನ್ಯಕ್ಕಾದರೂ ಸಭೆ ಕರೆದು ಎಲ್ಲಿ ಲೋಪವಾಗಿದೆ, ಹೇಗೆ ಪರಿಹರಿಸಿಕೊಳ್ಳಬಹುದು ಎಂಬ ನಿಟ್ಟಿನಲ್ಲಿ ನಮ್ಮನ್ನು ಕರೆದು ಚರ್ಚಿಸಬಹುದಿತ್ತು. ಇನ್ನು ಸುಪ್ರೀಂ ಕೋರ್ಟ್ ಆದೇಶ ಬಂದ ನಂತರವೂ ಶಿಕ್ಷಣ ಸಚಿವರು ಮೌನವಾಗಿದ್ದಾರೆ. ಪಾಲಕ, ಪೋಷಕರಿಗೆ ಅನುಕೂಲ ಕಲ್ಪಿಸೋಣ ಎಂಬ ಕನಿಷ್ಠ ಸೌಜನ್ಯ ತೋರಿಸಿಲ್ಲ. ಶಿಕ್ಷಣ ಸಚಿವರು ಇದ್ದಾರೆಯೋ ಇಲ್ಲವೋ ಗೊತ್ತಿಲ್ಲ. ಬದ್ಧತೆ ಉಳ್ಳ ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆ ಕರೆದು ಚರ್ಚಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಿಬಿಎಸ್​ಸಿ ರಾಜ್ಯ ಸಂಘಟನೆ ಮುಖ್ಯಸ್ಥ ಶ್ರೀನಿವಾಸನ್, ಐಸಿಎಸ್​ಸಿ ಶಿಕ್ಷಣ ಸಂಸ್ಥೆಗಳ ಸಂಘಟನೆ ಅಧ್ಯಕ್ಷ ಇಕ್ಬಾಲ್, ಕರ್ನಾಟಕ ಐಸಿಎಸ್​ಸಿ ಸ್ಕೂಲ್ ಪ್ರಿನ್ಸಿಪಲ್ ಸಂಘದ ಮುಖ್ಯಸ್ಥೆ ಡಾ. ಗಾಯತ್ರಿ ದೇವಿ, ಕ್ಯಾಮ್ಸ್ ಉಪಾಧ್ಯಕ್ಷ ಸತ್ಯನಾರಾಯಣ್, ಅಲ್ಪಸಂಖ್ಯಾತ ಸಂಶ್ಥೆಗಳ ಅಪ್ಶಾದ್, ಹಾಗೂ ಕುಸ್ಮಾ ಸಂಘಟನೆಯ ಸತ್ಯಮೂರ್ತಿ ಭಾಗವಹಿಸಿದ್ದರು.

ಇದನ್ನೂ ಓದಿ :ಪಿಯು ವಿಜ್ಞಾನ, ವಾಣಿಜ್ಯ ಪಠ್ಯದಲ್ಲಿ ಕಡಿತ: ಯಾವೆಲ್ಲ ವಿಷಯದಲ್ಲಿ ಕತ್ತರಿ?

ABOUT THE AUTHOR

...view details