ಬೆಂಗಳೂರು:ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿಗೆ ದಿನಕ್ಕೊಂದು ಅಚ್ಚರಿಯ ಮಾಹಿತಿ ದೊರೆಯುತ್ತಿದೆ. ಬ್ಯಾಟ್ಸ್‌ಮನ್, ಬೌಲರ್‌ಗಳನ್ನು ಫಿಕ್ಸ್ ಮಾಡೋದಕ್ಕೆ ಸ್ವತ: ಚಿಯರ್ ಗರ್ಲ್ಸ್ ಬರ್ತಾ ಇದ್ರು ಅನ್ನೋ ಸಂಗತಿ ಗೊತ್ತಾಗಿದೆ.
ಇತ್ತೀಚೆಗಷ್ಟೇ ನಗರ ಆಯುಕ್ತ ಭಾಸ್ಕರ್ ರಾವ್ ಅವರು, ಕೆಪಿಎಲ್ ಕ್ರಿಕೆಟ್‌ನಲ್ಲಿ ಪ್ರತಿಷ್ಠಿತ ಆಟಗಾರರನ್ನು ಬೆಟ್ಟಿಂಗ್ ಹಾಗೂ ಫಿಕ್ಸಿಂಗ್‌ನಲ್ಲಿ ಸಿಲುಕಿಸಲು ಬುಕ್ಕಿಗಳು ಹನಿಟ್ರ್ಯಾಪ್ ವಿಧಾನ ಅನುಸರಿಸುತ್ತಿದ್ದರು ಅನ್ನೋ ವಿಚಾರವನ್ನು ತಿಳಿಸಿದ್ದರು. ಆದ್ರೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತನಿಖಾ ತಂಡ ಪ್ರಕರಣದ ಆಳಕ್ಕಿಳಿದು ಮತ್ತಷ್ಟು ಅಚ್ಚರಿಯ ವಿಚಾರಗಳನ್ನು ಹೊರಗೆಡಹುತ್ತಿದೆ. ಫಿಕ್ಸಿಂಗ್ ಮಾಡೋದಕ್ಕೆ ಚಿಯರ್ ಗರ್ಲ್ಸ್ ಬಳಸಿಕೊಳ್ತಿದ್ದಿದ್ದು ಲೇಟೆಸ್ಟ್ ನ್ಯೂಸ್ ಅಪ್ಡೇಟ್!
ಚಿಯರ್ ಗರ್ಲ್ಸ್ ಮೂಲಕ ಫಿಕ್ಸಿಂಗ್
ಮ್ಯಾಚ್ ಎಲ್ಲೇ ನಡೆಯಲಿ ಅಲ್ಲಿ ಸ್ಟೇಡಿಯಂನ ಎರಡು ಮೂರು ಭಾಗದಲ್ಲಿ ನಾಲ್ಕೈದು ಹುಡುಗಿಯರು ಬಣ್ಣಬಣ್ಣದ ಬಟ್ಟೆ ಧರಿಸಿ, ಕುಣಿದು ಕ್ರಿಕೆಟಿಗರು ಹಾಗೂ ವೀಕ್ಷಕರ ಗಮನವನ್ನು ತಮ್ಮತ್ತ ಸೆಳೆಯುತ್ತಾರೆ. ಇವರು ಮ್ಯಾಚ್‌ನಲ್ಲಿ ಆಟಗಾರರು ಸಿಕ್ಸ್ ಹಾಗೂ ಫೋರ್ ಹೊಡೆದಾಗ ಕೈಯಲ್ಲಿ ಬಣ್ಣದ ಕಾಗದ ಹಿಡಿದು ಚಿಯರ್ ಮಾಡ್ತಾರೆ. ಇದೇ ಸುಂದರಿಯರನ್ನು ಬಳಸಿಕೊಳ್ತಿದ್ದ ಬುಕ್ಕಿಗಳು ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದರು. ಈ ವಿಚಾರದ ಬಗ್ಗೆ ತನಿಖೆ ಮಾಡುತ್ತಿರುವ ಸಿಸಿಬಿ, ಚಿಯರ್ ಗರ್ಲ್ಸ್‌ಗೂ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಎಲ್ಲಾ ಕೆಪಿಎಲ್ ತಂಡದ ಮಾಲೀಕರು ಹಾಗೂ ನಿರ್ವಾಹಕರಿಗೆ ಸಿಸಿಬಿ ಚಾಟಿ ಬೀಸಿದ್ದು ಸ್ಪಷ್ಟನೆ ನೀಡುವಂತೆ 7 ತಂಡಗಳ ಫ್ರಾಂಚೈಸಿ ಮಾಲೀಕರು ಹಾಗೂ ಕೆಪಿಎಲ್ ಆಯೋಜಿಸುತ್ತಿರುವ ರಾಜ್ಯ ಕ್ರಿಕೆಟ್ ಮಂಡಳಿಗೆ ವಿಚಾರಣೆಗೆ ಬರುವಂತೆ ಸೂಚಿಸಿತ್ತು. ಆದರೆ ಇಲ್ಲಿಯವರೆಗೆ ಮೈಸೂರು, ಬೆಂಗಳೂರು ತಂಡ ಮಾತ್ರ ಮಾಹಿತಿ ನೀಡಿದೆ. ಇನ್ನು ಕೆಲ ತಂಡಗಳು ಹಿಂದೇಟು ಹಾಕಿದ್ದು ಸಿಸಿಬಿ ಮತ್ತೆ ನೋಟಿಸ್ ನೀಡುವ ಸಾಧ್ಯತೆ ಇದೆ.