ಬೆಂಗಳೂರು:ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದ ಅಂತಾರಾಷ್ಟ್ರೀಯ ಬುಕ್ಕಿಯನ್ನ ಇದೀಗ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಬುಕ್ಕಿ ಸಯ್ಯಂ ಬಂಧಿತ ಆರೋಪಿ. ಈ ಅಂತಾರಾಷ್ಟ್ರೀಯ ಬುಕ್ಕಿ ಸಯ್ಯಂ ಹರ್ಯಾಣ ಮೂಲದವನಾಗಿದ್ದು, ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಸ್ಪಕ್ ಆಲಿಯನ್ನ ಬಂಧಿಸುತ್ತಿದ್ದಂತೆ ವೆಸ್ಟ್ ಇಂಡೀಸ್ನಲ್ಲಿ ತಲೆಮರೆಸಿಕೊಂಡಿದ್ದ. ಕೆಪಿಎಲ್ ಪ್ರಕರಣದಲ್ಲಿ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ತನಿಖೆಗೆ ಇಳಿದಾಗ ಹಲವು ಮಂದಿ ಅಂತಾರಾಷ್ಟ್ರೀಯ ಬುಕ್ಕಿಗಳು ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಈ ಬಗ್ಗೆ ತನಿಖೆಗೆ ಇಳಿದಾಗ ಭಾಗಿಯಾದ ಕೆಲ ಬುಕ್ಕಿಗಳು ವಿದೇಶಕ್ಕೆ ಹೋಗಿರುವ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ತಲೆಮರೆಸಿಕೊಂಡವರಿಗೆ ಸಿಸಿಬಿ ಲುಕ್ ಔಟ್ ನೋಟಿಸ್ ಹೊರಡಿಸಿತ್ತು. ಖಚಿತ ಮಾಹಿತಿ ಮೇರೆಗೆ ಸಿಸಿಬಿ, ದೆಹಲಿಗೆ ವಾಪಸಾದ ಸಯ್ಯಂನನ್ನ ವಶಕ್ಕೆ ಪಡೆದಿದೆ. ನಗರದ ಸಿಸಿಬಿ ಕಚೇರಿಗೆ ಕರೆ ತಂದು ನ್ಯಾಯಲಯಕ್ಕೆ ಹಾಜರುಪಡಿಸಿ ಹೆಚ್ಚಿನ ಮಾಹಿತಿ ಪಡೆಯಲಿದೆ. ಈತ ಬುಕ್ಕಿ ಭವೀಶ್ ಭಫ್ನಾ ಜೊತೆ ಸೇರಿ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿದ್ದ. ಭವೀಶ್ ಭಫ್ನಾ ಹಾಗೂ ಈಗ ಬಂಧನವಾದ ಸಯ್ಯಂನನ್ನು ಬಳ್ಳಾರಿ ತಂಡದ ಬೌಲರ್ ಒಬ್ಬನಿಗೆ ಹಣದ ಆಮಿಷ ಒಡ್ಡಿ ಒಂದು ಓವರ್ನಲ್ಲಿ ನಾವು ಹೇಳಿದಷ್ಟು ರನ್ ಕೊಟ್ಟರೆ ಕೇಳಿದಷ್ಟು ಹಣ ಕೊಡುವುದಾಗಿ ಹೇಳಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದರು ಎಂಬ ಆರೋಪದ ಮೇರೆಗೆ ಬಂಧಿಸಲಾಗಿದೆ.