ಬೆಂಗಳೂರು:ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ & ಬೆಟ್ಟಿಂಗ್ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಅಧಿಕಾರಿಗಳು, ಮೂರು ಪ್ರತ್ಯೇಕ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಪ್ರಾಥಮಿಕ ಚಾರ್ಚ್ ಶೀಟ್ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಇಂದು ಸಲ್ಲಿಕೆ ಮಾಡಿದ್ದಾರೆ.
ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 16 ಆರೋಪಿಗಳ ಹೆಸರುಗಳನ್ನು ಉಲ್ಲೇಖ ಮಾಡಿದ್ದಾರೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಎರಡು ಟೀಮ್ ಮಾಲೀಕರ ಹೆಸರು, ಕೆಎಸ್ಸಿಎ ಆಡಳಿತ ವಿಭಾಗದ ಸದಸ್ಯೆ ಶಿಂಧೆ, ಇಬ್ಬರು ಆಟಗಾರರು ಜೊತೆಗೆ ಓರ್ವ ಬುಕ್ಕಿ ಹೆಸರು ಉಲ್ಲೇಖಮಾಡಿದ್ದಾರೆ.
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಭಾರತಿನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಬೆಳಗಾವಿ ಟೀಮ್ ಮಾಲೀಕ ಅಲಿ, ಬಳ್ಳಾರಿ ಟೀಮ್ ಮಾಲೀಕ ಅರ್ವಿಂದ್ ರೆಡ್ಡಿ, ಆಟಗಾರರಾದ ಗೌತಮ್ ಮತ್ತು ಖಾಜಿ, ಬುಕ್ಕಿ ಮಾವಿ ಹೆಸರು ಉಲ್ಲೇಖ ಮಾಡಿದ್ದಾರೆ. ಹಾಗೆ ಜೆಪಿ ನಗರ ಠಾಣೆಯಲ್ಲಿ ದಾಖಲಾಗಿದ್ದ, ಪ್ರಕರಣದಲ್ಲಿ ಬುಕ್ಕಿ ಬಾಫ್ನಾ, ಸಯ್ಯಾಂ, ಜತಿನ್ ಹಾಗೂ ಹರೀಶ್ ಹೆಸರು ಉಲ್ಲೇಖ ಮಾಡಿದ್ದಾರೆ.
ಚಾರ್ಜ್ ಶೀಟ್ನಲ್ಲಿ ಉಲ್ಲೇಖವಾದ ಪ್ರಮುಖ ಅಂಶಗಳು:
ಮೊದಲು ಅಂತರಾಷ್ಟ್ರೀಯ ಮಟ್ಟದ ಬುಕ್ಕಿಗಳು ಕೆಪಿಎಲ್ ತಂಡಗಳ ಮಾಲೀಕರ ಸಂಪರ್ಕ ಮಾಡಿ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಮಾತನಾಡಿ, ನಂತರ ಮಾಲೀಕರಿಂದ ತಮ್ಮ ತಂಡದ ಕೆಲ ಆಟಗಾರರ ಸಂಪರ್ಕ ಮಾಡಿ ಆಟಗಾರರು ಹಾಗೂ ಬುಕ್ಕಿಗಳು ಜೊತೆ ಅನ್ಯೋನ್ಯತೆ ಬೆಳೆಸಿ ಫಿಕ್ಸಿಂಗ್ ಮಾಡ್ತಿದ್ದ ವಿಚಾರ ಉಲ್ಲೇಖ ಮಾಡಿದ್ದಾರೆ. ಹಾಗೆ ಮ್ಯಾಚ್ ಫಿಕ್ಸಿಂಗ್ಗೆ ಬಳಸಿಕೊಳ್ಳುತ್ತಿದ್ದ ಟ್ರಿಕ್ಸ್, ಒಂದು ಓವರ್ನಲ್ಲಿ 10ಕ್ಕೂ ಹೆಚ್ಚು ರನ್ ನೀಡುವಂತೆ ಡೀಲ್, ಅತೀ ಹೆಚ್ಚು ಬಾಲ್ಗಳಲ್ಲಿ ಕಡಿಮೆ ರನ್ಗಳಿಸುವಂತೆ ಫಿಕ್ಸ್, ಫುಲ್ ಸ್ಲೀವ್ ಶರ್ಟ್ನನ್ನು ಅರ್ಧಕ್ಕೆ ಏರಿಸಿಕೊಂಡು ಸಿಗ್ನಲ್, ಪದೇ ಪದೇ ಬ್ಯಾಟ್ಗಳನ್ನು ಬದಲಿಸುವ ರೀತಿ ಸಿಗ್ನಲ್ ನೀಡುತ್ತಿರುವುದ ಕುರಿತು ಆರೋಪಿಗಳು ಬಾಯಿಬಿಟ್ಟ ಎಲ್ಲಾ ವಿಚಾರ ಉಲ್ಲೇಖ ಮಾಡಿದ್ದಾರೆ.