ಬೆಂಗಳೂರು: ರೈತ ನಾಯಕರು ನಾಳೆ ಕರೆ ಕೊಟ್ಟಿರುವ ಹೋರಾಟಕ್ಕೆ ಕಾಂಗ್ರೆಸ್ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ನಾಳೆ ರೈತ ನಾಯಕರು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ರ‍್ಯಾಲಿಗೆ ಬೆಂಬಲ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈಗಾಗಲೇ ಮಾಹಿತಿ ನೀಡಿದ್ದಾರೆ. ಇವರ ಹೇಳಿಕೆಯ ನಂತರ ಪಕ್ಷದ ಎಲ್ಲಾ ರಾಜ್ಯ ನಾಯಕರಿಗೂ ಹೋರಾಟಕ್ಕೆ ಸಜ್ಜಾಗುವಂತೆ ಸೂಚಿಸಲಾಗಿದೆ. ಆಯಾ ಜಿಲ್ಲಾ ಕೇಂದ್ರಗಳಲ್ಲಿ ಮುಖಂಡರು ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸಲಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಬೆಂಗಳೂರಿನಲ್ಲಿ ಸಹ ಪಕ್ಷದ ರೈತರ ಘಟಕ ಪ್ರತಿಭಟನಾ ಮೆರವಣಿಗೆಯನ್ನು ಬೆಂಬಲಿಸಿ ಪಾಲ್ಗೊಳ್ಳುತ್ತಿದೆ. ನಾಳಿನ ಹೋರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟವನ್ನು ಹತ್ತಿಕ್ಕುವ ಕಾರ್ಯ ಮಾಡುವುದು ಸರಿಯಲ್ಲ. ಪೊಲೀಸರನ್ನು ಬಳಸಿಕೊಂಡು ನಾಳಿನ ಹೋರಾಟವನ್ನು ಹತ್ತಿಕ್ಕುವ ಕಾರ್ಯವನ್ನು ಸರ್ಕಾರ ಮಾಡಬಾರದು ಎಂದು ಒತ್ತಾಯಿಸುತ್ತೇವೆ ಎಂದರು.
ರೈತರ ಹೋರಾಟ ಬೆಂಬಲಿಸುವಂತೆ ಆಯಾ ಜಿಲ್ಲಾ ನಾಯಕರಿಗೆ ಸೂಚನೆ ನೀಡಿದ್ದೇವೆ. ಅವರ ನೇತೃತ್ವದಲ್ಲಿಯೇ ಅಲ್ಲಿ ಪ್ರತಿಭಟನೆಗಳು ನಡೆಯಲಿವೆ. ಇಲ್ಲಿ ಬಹುಶಃ ಪೊಲೀಸರು ಟ್ರ್ಯಾಕ್ಟರ್ ರ‍್ಯಾಲಿಗೆ ಅವಕಾಶ ಕೊಡುವ ಸಾಧ್ಯತೆ ಕಡಿಮೆ ಇದೆ. ನಾವು ಜ.20ರಂದು ಕರೆ ಕೊಟ್ಟಿದ್ದ ಮೆರವಣಿಗೆಗೆ ಸಹ ಟ್ರ್ಯಾಕ್ಟರ್ಗಳು ಬರದಂತೆ ನಗರ ಹೊರವಲಯದಲ್ಲಿ ತಡೆಯಲಾಗಿತ್ತು. ಈ ಬಾರಿ ಅದು ಮರುಕಳಿಸುವ ಸಾಧ್ಯತೆಯಿದೆ. ಇದು ರೈತಪರ ಜನರ ಹೋರಾಟವಾಗಿದ್ದು, ಇದಕ್ಕೆ ಸರ್ಕಾರ ಅನುಮತಿ ನೀಡಬೇಕು. ರೈತ ಪರ ಹೋರಾಟವನ್ನು ಸರ್ಕಾರ ಪ್ರತಿಷ್ಠೆಯಾಗಿ ಪರಿಗಣಿಸಿ ನಿಯಂತ್ರಿಸುವ ಕಾರ್ಯ ಮಾಡಬಾರದು ಎಂದು ಹೇಳಿದರು.
ನಮ್ಮ ಹೋರಾಟ ಯಶಸ್ವಿ:
ಪಕ್ಷದ ರಾಷ್ಟ್ರೀಯ ನಾಯಕರು ಕರೆ ಕೊಟ್ಟಂತೆ ಜ.20ರಂದು ನಾವು ರಾಜಭವನ ಚಲೋ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದೇವೆ. ಅದು ಯಶಸ್ಸು ಕಂಡಿದೆ. ಅಂದು ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ರೀತಿಯ ಘಟನೆ ನಾಳೆಯೂ ಮರುಕಳಿಸದಂತೆ ರಾಜ್ಯ ಸರ್ಕಾರ ಎಚ್ಚರ ವಹಿಸಲಿ.
ನಮ್ಮ ಪಕ್ಷದ ಶಾಸಕಿಯರಾದ ಸೌಮ್ಯ ರೆಡ್ಡಿ ಹಾಗೂ ಅಂಜಲಿ ನಿಂಬಾಳ್ಕರ್ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಸಂದರ್ಭ ನಾನು ಅಲ್ಲಿಯೇ ಇದ್ದೆ. ನಾವು ಹಲವು ನಾಯಕರು ಈ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದೇವೆ. ಈ ಘಟನೆ ನಡೆದ ತಕ್ಷಣ ಸೌಮ್ಯ ರೆಡ್ಡಿ ಹೋಗಿ ದೂರು ಸಲ್ಲಿಸಿದ್ದಾರೆ. ಆದರೆ ಅದನ್ನು ಪೊಲೀಸರು ಸ್ವೀಕರಿಸಿಲ್ಲ. ಆದರೆ ಈ ಘಟನೆಗೆ ಸಲ್ಲಿಕೆಯಾದ ಪ್ರತಿ ದೂರನ್ನು ಪೊಲೀಸರು ತಕ್ಷಣ ಸ್ವೀಕರಿಸಿದ್ದಾರೆ ಎಂದು ಸಲೀಂ ಅಹ್ಮದ್ ದೂರಿದರು.