ಬೆಂಗಳೂರು: ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಕಾಂಗ್ರೆಸ್ ಹದಿನೈದು ಪ್ರಶ್ನೆಗಳನ್ನು ಕೇಳಿದೆ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಇದೇ 11 ರಂದು ರಾಜ್ಯಕ್ಕೆ ಬರ್ತಿದ್ದಾರೆ. ಕೆಂಪೇಗೌಡ ಪುತ್ಥಳಿ ಅನಾವರಣ ಮಾಡುವುದಕ್ಕೆ ಬರ್ತಿದ್ದಾರೆ. ಇದು ಬಹಳ ಸಂತೋಷದ ವಿಚಾರ. ಆದ್ರೆ ಪಿಎಂ ಮೋದಿ ಚುನಾವಣೆ ಸಂದರ್ಭದಲ್ಲಿ ರಾಜ್ಯ ಪ್ರವಾಸ ಮಾಡ್ತಿದ್ದಾರೆ. ಚುನಾವಣೆ ಮುಂಚೆ ಬಿಜೆಪಿ 600 ಭರವಸೆ ನೀಡಿತ್ತು. ಆದ್ರೆ 10 ರಷ್ಟು ಭರವಸೆಗಳನ್ನೂ ಈಡೇರಿಸಿಲ್ಲ. ಮಾತು ಎತ್ತಿದ್ರೆ ಸಿಎಂ ದಮ್ ತಾಕತ್ ಬಗ್ಗೆ ಮಾತಾಡ್ತಾರೆ. ನಮ್ಮ ಪ್ರಶ್ನೆಗಳಿಗೆ ಸಿಎಂ ಅಂತು ಉತ್ತರ ಕೊಡುತ್ತಿಲ್ಲ. ಪ್ರಧಾನಿ ಮೋದಿ ರಾಜ್ಯಕ್ಕೆ ಬರ್ತಿದ್ದಾರೆ. 56 ಇಂಚಿನ ಎದೆ ಹೊಂದಿದ ಪ್ರಧಾನಿ ಮೋದಿ ಆದ್ರೂ ನಮ್ಗೆ ಉತ್ತರ ಕೊಡ್ತಾರಾ? ಅನ್ನೋದನ್ನು ನೋಡಬೇಕಿದೆ ಎಂದು ಕುಟುಕಿದರು.
ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ 15 ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್ - mekedatu project
ಪಿಎಂ ಮೋದಿ ಚುನಾವಣೆ ಸಂದರ್ಭದಲ್ಲಿ ರಾಜ್ಯ ಪ್ರವಾಸ ಮಾಡ್ತಿದ್ದಾರೆ. ಚುನಾವಣೆ ಮುಂಚೆ ಬಿಜೆಪಿ 600 ಭರವಸೆ ನೀಡಿತ್ತು. ಆದ್ರೆ 10 ರಷ್ಟು ಭರವಸೆಗಳನ್ನೂ ಈಡೇರಿಸಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಕುಟುಕಿದ್ದಾರೆ.
ಕಾಂಗ್ರೆಸ್ ಕೇಳಿದ 15 ಪ್ರಶ್ನೆಗಳು: ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ನಿರಂತರವಾಗಿ ಪ್ರವಾಹಕ್ಕೆ ಸಿಲುಕಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಕಡೆ ತಲೆ ಹಾಕದ ನಿಮಗೆ ಈಗ ಚುನಾವಣೆ ಬಂದ ತಕ್ಷಣ ರಾಜ್ಯ ನೆನಪಾಯಿತೆ? ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ನೆರೆಯಿಂದಾಗಿ 2.62 ಲಕ್ಷ ಮನೆಗಳು, 1.5 ಲಕ್ಷ ಕಿ.ಮೀ ರಸ್ತೆಗಳು, 30 ಸಾವಿರ ಸೇತುವೆಗಳು, 54.32 ಲಕ್ಷ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕಾ ಬೆಳೆ ನಾಶವಾಗಿದೆ. ಒಟ್ಟು 93,648 ಕೋಟಿ ರೂಪಾಯಿಯಷ್ಟು ನಷ್ಟವಾಗಿದ್ದು, ರಾಜ್ಯಕ್ಕೆ ಕೇಂದ್ರದಿಂದ ಬಂದಿರುವ ಪರಿಹಾರ ಎಷ್ಟು? ಕೇಳಿದರು.
- ಡಬಲ್ ಇಂಜಿನ್ ಸರ್ಕಾರ ಬಂದರೆ ರಾಜ್ಯವನ್ನು ಅಭಿವೃದ್ಧಿಯಲ್ಲಿ ತೇಲಿಸುತ್ತೇವೆ ಎಂದಿದ್ದೀರಿ ನೆನಪಿದೆಯಾ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಸ್ಮಾರ್ಟ್ ಸಿಟಿ, ಜಲ್ ಜೀವನ ಮಿಷನ್, 2 ಕೋಟಿ ಉದ್ಯೋಗ. ರೈತರ ಆದಾಯ ಡಬಲ್ (2022 ಒಳಗೆ) ಎಲ್ಲರಿಗೂ ಸ್ವಂತ ಸೂರು (2022 ಒಳಗೆ) ಯಾವ ಒಂದು ಯೋಜನೆ ಸಂಪೂರ್ಣವಾಗಿದೆ ಹೇಳಿ?
- ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ಜಿಎಸ್ಟಿ ಕಟ್ಟುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ 2ನೇ ರಾಜ್ಯ ಎಂದು ನಿಮ್ಮದೇ ಸರ್ಕಾರ ಟ್ವಿಟ್ ಮಾಡಿತ್ತು. ಇದು ನಿಮ್ಮ ಸಾಧನೆ ಅಲ್ಲ. ಅದು ಈ ರಾಜ್ಯದ ಜನರ ಬೆವರಿನ ಪರಿಶ್ರಮ. ಆದರೆ ನೀವು ಕಲೆಹಾಕಿದ ಜಿಎಸ್ಟಿ ಹಣದಲ್ಲಿ ರಾಜ್ಯಗಳಿಗೆ ಹಂಚಿಕೆ ಆಗುವ ಅನುದಾನದ ಪಟ್ಟಿಯಲ್ಲಿ ರಾಜ್ಯ ಎಷ್ಟನೇ ಸ್ಥಾನ ಇದೆ ಎಂದು ಹೇಳುತ್ತೀರಾ? ಆ ಮೂಲಕ ನಿಮ್ಮ ಸಾಧನೆ ಏನು ಎಂದು ಹೇಳುತ್ತೀರಾ?
- ಮೊನ್ನೆಯಷ್ಟೇ ರಾಜ್ಯ ಪ್ರವಾಸ ಮಾಡಿ ಕಾಂಗ್ರೆಸ್ ಸರ್ಕಾರ ಮಾಡಿದ್ದ ಯೋಜನೆಗಳನ್ನು ಅನಾವರಣ ಮಾಡಿ ಕ್ಯಾಮೆರಾಗೆ ಪೋಸ್ ಕೊಟ್ಟು ಹೋದಿರಿ. ಈ ಸಂದರ್ಭದಲ್ಲಿ ಸಬ್ ಅರ್ಬನ್ ರೈಲಿಗೆ 40 ತಿಂಗಳು ಗಡುವು ನೀಡಿದ್ದೀರಿ. ಈ ಯೋಜನೆಗೆ ಕೇಂದ್ರ ಬಿಡುಗಡೆ ಮಾಡಬೇಕಾಗಿದ್ದ ಹಣ ಎಷ್ಟು? ಈವರೆಗೂ ಎಷ್ಟು ಬಿಡುಗಡೆ ಮಾಡಿದ್ದೀರಿ?
- ನೀವು ಬಂದಾಗ ನಿಮ್ಮನ್ನು ಮೆಚ್ಚಿಸಲು ಬೆಂಗಳೂರು ನಗರದಲ್ಲಿ ಸಿಂಗಾರ ಮಾಡಲು ರಾಜ್ಯ ಸರ್ಕಾರ 23 ಕೋಟಿ ವೆಚ್ಚದಲ್ಲಿ ರಸ್ತೆ ಹಾಕಿದರು. ನೀವು ರಾಜ್ಯ ಬಿಡುತ್ತಿದ್ದಂತೆ ರಸ್ತೆಯ ಡಾಂಬರು ಕೂಡ ಕಿತ್ತು ಬಂದವು. ಡಬಲ್ ಇಂಜಿನ್ ಸರ್ಕಾರದ ಈ ಮಹಾನ್ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
- ಭಷ್ಟಾಚಾರದ ವಿರುದ್ಧ ಉದ್ದುದ್ದ ಭಾಷಣ ಬಿಗಿದು ನಾ ಖಾವೂಂಗಾ ನಾ ಖಾನೆದೂಂಗಾ ಎಂದ ನೀವು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ 40% ಕಮಿಷನ್ ಕುರಿತ ದೂರು, ಗುತ್ತಿಗೆದಾರ ಸಂತೋಷ್ ಪಾಟೀಲ್' ಆತ್ಮಹತ್ಯೆ, ಹುಬ್ಬಳ್ಳಿ ಗುತ್ತಿಗೆದಾರ ಬಸವರಾಜ್ ಅವರ ದಯಾಮರಣ ಅರ್ಜಿ ಬಗ್ಗೆ ಬಾಯಿಗೆ ಬೀಗ ಜಡಿದುಕೊಂಡಿರುವುದು ಏಕೆ?
- ವರ್ಷಕ್ಕೆ 2 ಕೋಟಿ ಉದ್ಯೋಗ ಎಂದವರು, ಈಗ 70 ಸಾವಿರ ನೇಮಕಾತಿಯನ್ನೇ ದೊಡ್ಡ ಸಾಧನೆ ಎಂದು ಪ್ರಚಾರ ಪಡೆಯುತ್ತೀರಿ. ಪಿಎಸ್‌ಐ, ಶಿಕ್ಷಕರು, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ತಾಂಡವವಾಡುತ್ತಿದೆ. ಆದರೂ ಸಿಬಿಐ, ಇಡಿ, ಅದಾಯ ತೆರಿಗೆ ಇಲಾಖೆಗಳಿಂದ ತನಿಖೆ ಯಾಕಿಲ್ಲ? ಭ್ರಷ್ಟಾಚಾರ ವಿರುದ್ಧದ ಹೋರಾಟ ಎಂದರೆ, ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದು ಮಾತ್ರವೇ?
- ನಿಮ್ಮಣ್ಣ ಮುಖ್ಯಮಂತ್ರಿ ಕುರ್ಚಿಯನ್ನು 2500 ಕೋಟಿಗೆ, ಮಂತ್ರಿಸ್ಥಾನವನ್ನು 100 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ನಿಮ್ಮದೇ ಶಾಸಕರು ಹೇಳಿದ್ದಾರೆ. ನಿಮ್ಮ ಈ ಅಮೋಘ ಸಾಧನೆ ಬಗ್ಗೆ ಏನು ಹೇಳುತ್ತೀರಿ?
- ಸಿಲಿಕಾನ್ ಸಿಟಿ, ಐಟಿ ರಾಜಧಾನಿ ಎಂದು ಮನ್ನಣೆ ಗಳಿಸಿದ್ದ ಬೆಂಗಳೂರು ನಗರ ನಿಮ್ಮ ಡಬಲ್ ಇಂಜಿನ್ ಆಡಳಿತದಲ್ಲಿ ಪಾಟರಿ, ಗಾರ್ಬೇಜ್ ಸಿಟಿ ಆಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?
- ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಿಂದ ರಸ್ತೆ ಗುಂಡಿಗೆ 20ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದರ ಜವಾಬ್ದಾರಿಯನ್ನು ನಿಮ್ಮ ಡಬಲ್ ಇಂಜಿನ್ ಸರ್ಕಾರ ವಹಿಸುತ್ತಾ?
- ನಾವು ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದೇವೆ. ಅದಕ್ಕೆ ಹೆದರದ ನಿಮ್ಮ ಸರ್ಕಾರ ಬಜೆಟ್ ನಲ್ಲಿ ಯೋಜನೆಗೆ 1 ಸಾವಿರ ಕೋಟಿ ಎಂದು ಘೋಷಣೆ ಮಾಡಿತು. ಮೇಕೆದಾಟು ಯೋಜನೆ ಜಾಲ ವಿಚಾರ ಎಲ್ಲಿಯವರೆಗೆ ಬಂತು?
- ಅದೇ ರೀತಿ ಮಹದಾಯಿ ವಿಚಾರದಲ್ಲೂ ರಾಜ್ಯ ಸರ್ಕಾರ 1 ಸಾವಿರ ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಒಟ್ಟು ನಾಲ್ಕು ಇಂಜಿನ್ ಸರ್ಕಾರ ನಿಮ್ಮದೇ ಇದೆ. ಮಹದಾಯಿ ಯೋಜನೆ ಜಾಲ ಯಾವಾಗ?
- ಕೋವಿಡ್ ನಿಂದ ಸತ್ತವರಲ್ಲಿ ಎಷ್ಟು ಕುಟುಂಬಕ್ಕೆ ಪರಿಹಾರ ನೀಡಿದ್ದೀರಿ?
- ನಿಮ್ಮ ಈ ರಾಜ್ಯ ಪ್ರವಾಸದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡದೇ, ನಿಮ್ಮ ಡಬಲ್ ಇಂಜಿನ್ ಸರ್ಕಾರದ ಯಾವುದಾದರೂ ಐದು ಕೊಡುಗೆಗಳನ್ನು ಹೇಳಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಸಾಧ್ಯವೇ?
- ನಾಡಪ್ರಭು ಕೆಂಪೇಗೌಡರು ಈ ನಗರ ಕಟ್ಟುವಾಗ ಎಲ್ಲಾ ಸಮುದಾಯದವರಿಗೂ ಅನುಕೂಲ ಆಗಲೆಂದು 52 ಸಮುದಾಯಗಳ ಪೇಟೆಗಳನ್ನು ನಿರ್ಮಿಸಿದ್ದರು. ಅದು ನಿಜವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಆದರೆ ನಿಮ್ಮ ಡಬಲ್ ಇಂಜಿನ್ ಸರ್ಕಾರ ಜಾತಿ, ಧರ್ಮಗಳ ಹೆಸರಲ್ಲಿ ದ್ವೇಷ ಬಿತ್ತಿ ಸಮಾಜ ಒಡೆಯುತ್ತಿರುವುದು ಎಷ್ಟರಮಟ್ಟಿಗೆ ಸರಿ?.
ಓದಿ:ಮೈಸೂರಲ್ಲಿ ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ವಿಶೇಷ ಬನಾರಸ್ ಪೇಟ..