ಬೆಂಗಳೂರು:ಕೋವಿಡ್ -19ನಿಂದ ಮೃತಪಟ್ಟ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಮೃತದೇಹವನ್ನು ಅವರ ಸ್ವಂತ ಊರಿಗೆ ತಂದು ಅಂತಿಮ ಸಂಸ್ಕಾರ ಮಾಡಲು ಅವಕಾಶ ದೊರಕದೆ ಇರುವುದು ಅತೀವ ನೋವು ತಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಅಂಗಡಿಯವರ ಪಾರ್ಥೀವ ಶರೀರ ರಾಜ್ಯಕ್ಕೆ ಕಳುಹಿಸದ ಕೇಂದ್ರದ ವಿರುದ್ಧ ಖಂಡ್ರೆ ವಾಗ್ದಾಳಿ - ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇತ್ತೀಚಿನ ಸುದ್ದಿ
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಮೃತದೇಹವನ್ನು ರಾಜ್ಯಕ್ಕೆ ಕಳುಹಿಸಿಕೊಡದ ಕೇಂದ್ರದ ತೀರ್ಮಾನ ಅಮಾನವೀಯವಾದದ್ದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, 'ಜಾತಸ್ಯ ಮರಣಂ ಧ್ರುವಂ' ಎಂಬಂತೇ ಹುಟ್ಟಿದವರು ಸಾಯಲೇಬೇಕು. ಆದರೆ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಆಯಾ ಧರ್ಮದ ಧಾರ್ಮಿಕ ವಿಧಿವಿಧಾನಗಳ ರೀತಿ ನಡೆಸಬೇಕಾದ್ದು ಮಾನವೀಯತೆ. ಕೊನೆಯ ಬಾರಿಗೆ ಮುಖದರ್ಶನವೂ ಸಿಗದಿದ್ದರೆ ಅವರ ಕುಟುಂಬದವರು, ಬಂಧು, ಮಿತ್ರರಿಗೆ ಆಗುವ ನೋವು ಹೇಳತೀರದಂತಾಗುತ್ತದೆ ಎಂದಿದ್ದಾರೆ.
ಸಾಮಾನ್ಯವಾಗಿ ಮೃತಪಟ್ಟ ಕೆಲವು ಗಂಟೆಗಳ ಬಳಿಕ ದೇಹದಿಂದ ಸೋಂಕು ಹರಡುವುದಿಲ್ಲ ಎಂದು ಕೆಲವು ತಜ್ಞರು ಹೇಳುತ್ತಾರೆ. ಆದಾಗ್ಯೂ ಸೋಂಕು ಹರಡದ ರೀತಿ ಮುಖ ಮಾತ್ರ ಕಾಣುವಂತೆ ದೇಹವನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿ, ಗಾಜಿನ ಪೆಟ್ಟಿಗೆಯಲ್ಲಿಟ್ಟು ಗಾಳಿಯೂ ಹೋಗದ ರೀತಿ (ಏರ್ ಟೈಟ್) ಸೀಲ್ ಮಾಡಿ ವಿಮಾನದಲ್ಲಿ ಆಗದಿದ್ದರೆ, ರಸ್ತೆ ಮೂಲಕವೇ ಕಳುಹಿಸಬಹುದಾಗಿತ್ತು. ಸರ್ಕಾರ ಧಾರ್ಮಿಕ ವಿಧಿಗಳಿಗೆ ಚ್ಯುತಿಯಾಗದ ರೀತಿ, ಭಾವನೆಗಳಿಗೆ ಘಾಸಿಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರದ ಈ ತೀರ್ಮಾನ ಅಮಾನವೀಯವಾದದ್ದು ಎಂದು ಹೇಳಿದರು.