ಬೆಂಗಳೂರು: ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿರುವುದರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ಈ ಟ್ವೀಟ್ ತೆಗೆದುಹಾಕಲು ಸೂಚನೆ ನೀಡಲಾಗಿದೆ. ಈ ಅಚಾತುರ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇಂತಹ ಪ್ರಮಾದವನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಡಿಕೆಶಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ವಿರುದ್ಧದ ಟ್ವೀಟ್ ಹಿಂಪಡೆದ ಕಾಂಗ್ರೆಸ್; ಡಿಕೆಶಿ ವಿಷಾದ ಟ್ವೀಟ್‌ಗಳನ್ನು ಹಿಂಪಡೆದಿರುವ ಬಗ್ಗೆ ಮರಳಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ನಮ್ಮ ಹೋರಾಟ ಸದಾ ಜನಪರ, ನೈತಿಕ ಹಾಗೂ ಸೈದ್ಧಾಂತಿಕ ನೆಲೆಗಟ್ಟಿನಲ್ಲಿರುತ್ತದೆ. ತಾವು ಅಧಿಕಾರಕ್ಕೆ ಬಂದರೆ ಅಚ್ಛೇ ದಿನ್ ತರುವುದಾಗಿ ಹೇಳಿದ್ದ ಬಿಜೆಪಿ ಸರ್ಕಾರವನ್ನು ಉತ್ತರದಾಯಿಯನ್ನಾಗಿಸುವುದು ಕಾಂಗ್ರೆಸ್ ಪಕ್ಷದ ಕರ್ತವ್ಯ. ಈ ಪ್ರಯತ್ನದಲ್ಲಿ ಇಂದಿನ ಅಪ್ರಬುದ್ಧ ಪದಬಳಕೆಗೆ ನಾವು ವಿಷಾದ ವ್ಯಕ್ತಪಡಿಸುತ್ತಾ, ಅದನ್ನು ಹಿಂಪಡೆದಿದ್ದೇವೆ ಎಂದಿದೆ.
ನಿನ್ನೆ ಟ್ವೀಟ್ ಅಲ್ಲಿ ಏನಿತ್ತು?
ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲರಾಗುವ ಜೊತೆಗೆ ದೇಶದಲ್ಲಿ ಭ್ರಷ್ಟಾಚಾರ ಕೂಡ ಹೆಚ್ಚಿಸುವ ಮೂಲಕ ಮೋದಿ ಒಬ್ಬ ಹೆಬ್ಬೆಟ್ ಗಿರಾಕಿ ಆಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಲೇವಡಿ ಮಾಡಿ ಸರಣಿ ಟ್ವೀಟ್ ಮಾಡಿತ್ತು.