ಬೆಂಗಳೂರು : ರಾಜ್ಯ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಮಲ ಪಕ್ಷದ ಟ್ವೀಟ್ ದಾಳಿಗೆ ಪ್ರತಿಯಾಗಿ ತನ್ನ ವಾಗ್ದಾಳಿ ನಡೆಸಿದೆ. ಬಿಜೆಪಿಯ ಆರೋಪಗಳಿಗೆ ಟ್ವೀಟ್ ಮೂಲಕವೇ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್ ಪಕ್ಷ, ಭ್ರಷ್ಟಾಚಾರದ ಯೂನಿವರ್ಸಿಟಿಯಾಗಿರುವ ಬಿಜೆಪಿಯ ಪರ್ಸೆಂಟೇಜ್ ವ್ಯವಹಾರ ಎಷ್ಟಿದೆ ಎಂದು ಮೊನ್ನೆಯ ಐಟಿ ದಾಳಿಯಲ್ಲೇ ತಿಳಿದಿದೆ.
ನೀರಾವರಿ ಇಲಾಖೆಯ 2000 ಕೋಟಿ ಹಗರಣದಲ್ಲಿ ಎಷ್ಟು ಪರ್ಸೆಂಟ್ ಲೂಟಿ ಮಾಡಿದ್ದೀರಿ ರಾಜ್ಯ ಬಿಜೆಪಿ? ನಿಮ್ಮ ಪರ್ಸೆಂಟೇಜ್ ವ್ಯವಹಾರಗಳ ಬಗ್ಗೆ ಯತ್ನಾಳ್, ಹೆಚ್ ವಿಶ್ವನಾಥ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು ಮರೆತಿರಾ? ಎಂದು ಕೇಳಿದೆ.
ಮುಂದುವರಿದು, ಸಮರ್ಥ ನಾಯಕರಿಲ್ಲದ ಬಿಜೆಪಿಯಲ್ಲಿ ಮರಿಪುಡಾರಿಗಳೆಲ್ಲ ನಾನೇ ಸಿಎಂ ಎನ್ನುತ್ತಿದ್ದಾರೆ. ಬೆಲ್ಲದ್, ನಿರಾಣಿ, ಯತ್ನಾಳ್, ಲೂಟಿರವಿ, ಜೋಶಿ ಎಲ್ಲರೂ ಸಿಎಂ ಸೀಟಿಗೆ ಟವೆಲ್ ಹಾಕಿದ್ದನ್ನ ರಾಜ್ಯ ಕಂಡಿದೆ. ಬಿ ಎಸ್ ಯಡಿಯೂರಪ್ಪ ಅವರನ್ನ ಮಹಾನ್ ನಾಯಕ ಎಂದು ಹೊಗಳುತ್ತಲೇ ಪದಚ್ಯುತಿಗೊಳಿಸಿದ್ದೇಕೆ ಎಂಬ ಯಕ್ಷ ಪ್ರಶ್ನೆಗೆ ರಾಜ್ಯ ಬಿಜೆಪಿ ಉತ್ತರಿಸುವುದು ಯಾವಾಗ? ಎಂದಿದೆ.
ಬಾಯಿ ಚಪಲದ ಮಾತುಗಳಿಗೆ ಆಧಾರವಿಲ್ಲದಿದ್ದಕ್ಕೇ ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ನಿಮ್ಮ ಯತ್ನಾಳ್, ಹೆಚ್. ವಿಶ್ವನಾಥ್, ಸುರೇಶ್ ಗೌಡ ಅವರ ಆರೋಪದಲ್ಲಿ ಸತ್ಯವಿರುವುದರಿಂದ ತಾನೇ ತಾವು ಕ್ರಮ ಕೈಗೊಳ್ಳಲು ಹೆದರಿಕೊಂಡಿದ್ದು ರಾಜ್ಯ ಬಿಜೆಪಿ? ಅಂದಹಾಗೆ ಕೆಟ್ಟಿರುವ ಬಿಜೆಪಿಗರ ತಲೆ ಸರಿ ಮಾಡಲು ಸ್ಕ್ರೂಡ್ರೈವರ್ ಬೇಕೇಬೇಕು ಎಂದಿದೆ.
7.5 ಲಕ್ಷ ಕೋಟಿ ಉದ್ಯಮಿಗಳ ಸಾಲಕ್ಕೆ ಎಳ್ಳುನೀರು ಬಿಟ್ಟಿದ್ದೇಕೆ? ರೈತರ ಹತ್ಯೆಗೆ ಮೋದಿಯ ಮೌನವೇಕೆ? ದೇಶದಲ್ಲಿ ಹಸಿವು, ಬಡತನ ಹೆಚ್ಚಿದ್ದೇಕೆ? ಇವೆಲ್ಲವನ್ನೂ ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಕೇಳಿದ್ದಾರೆ, ಬಿಜೆಪಿ ಉತ್ತರಿಸುವುದೇ? ಎಂದು ಕೇಳಿದೆ.
ಬಾಯಿ ಚಪಲವೋ?:ಕಾಂಗ್ರೆಸ್ ದೇಶದ ಪ್ರಜಾಪ್ರಭುತ್ವವನ್ನಷ್ಟೇ ಅಲ್ಲ ಆಂತರಿಕ ಪ್ರಜಾಪ್ರಭುತ್ವವನ್ನೂ ಕಾಪಾಡಿಕೊಂಡು ಬಂದಿದೆ. ಅಡ್ವಾಣಿ, ಜಸ್ವಂತ್ ಸಿಂಗ್, ಅರುಣ್ ಶೌರಿ, ಯಶವಂತ್ ಸಿಂಗ್‌ನಂತವರನ್ನು ಸರ್ವಾಧಿಕಾರಿ ಮೋದಿಯ ಕಾಲ್ತುಳಿತಕ್ಕೆ ಸಿಕ್ಕು ಮಾರ್ಗವೂ ಇಲ್ಲದ, ದರ್ಶನವೂ ಇಲ್ಲದ ಮಾರ್ಗದರ್ಶಕ ಮಂಡಳಿಗೆ ಕಳಿಸಿ ಮುಗಿಸಿದ್ದೇಕೆ, ರಾಜ್ಯ ಬಿಜೆಪಿ ಹೇಳಲಿ.
ಮೋದಿ ವಿಶ್ವಾಸಘಾತುಕ ಎಂದ ರಾಮ್ ಜೇಟ್ಮಲಾನಿಯವರದ್ದು ಬಾಯಿ ಚಪಲವೋ, ಸತ್ಯವೋ?ಮೋದಿ ಅಯೋಗ್ಯ ಎನ್ನುವ ಸುಬ್ರಹ್ಮಣಿಯನ್ ಸ್ವಾಮಿ ಅವರದ್ದು ಬಾಯಿ ಚಪಲವೋ, ಸತ್ಯವೋ? ಹೈಕಮಾಂಡ್‌ಗೆ ಕಪ್ಪ ಸಲ್ಲಿಸಿದ್ದೇವೆ ಎಂದ ಬಿ ಎಸ್ ಯಡಿಯೂರಪ್ಪ ಮಾತು ಬಾಯಿ ಚಪಲವೋ, ಸತ್ಯವೋ? ನೀರಾವರಿ ಲೂಟಿ ಬಗ್ಗೆ ಹೇಳಿದ ವಿಶ್ವನಾಥ್‌ರದ್ದು ಚಪಲವೋ, ಸತ್ಯವೋ? ಬಿಜೆಪಿ ನಾಯಕರು ಇದಕ್ಕೆ ಉತ್ತರ ಹೇಳಲಿ ಎಂದಿದೆ.
ಸಿಟಿ ರವಿ ವಿರುದ್ಧ ವಾಗ್ದಾಳಿ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ನಿಮ್ಮ ಸಂಬಂಧಿಯನ್ನು ಮುಂದಿಟ್ಟುಕೊಂಡು ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆಗಳನ್ನು ಪಡೆದಿರುವ ನೀವು ಎಷ್ಟೆಷ್ಟು ಕಮಿಷನ್ ಕೊಟ್ಟಿದ್ದೀರ? ಸಾರಿಗೆ ಬಸ್ಸಿನಲ್ಲಿ ಓಡಾಡುತ್ತಿದ್ದ ಅಂದಿನ ಬಜರಂಗದಳ ಕಾರ್ಯಕರ್ತ, ಇಂದಿನ ಫುಲ್ ಟೈಂ ರಾಜಕಾರಣಿ ಸಿಟಿ ರವಿ ಅವರು ಕೋಟಿರವಿ ಆಗಿದ್ದು ಹೇಗೆ?ಎಲ್ಲಿ, ಯಾರಿಂದ, ಎಷ್ಟೆಷ್ಟು ಕಲೆಕ್ಷನ್ ಮಾಡಿದಿರಿ? ಲೂಟಿ ರವಿ ಎಂದು ಕೇಳಿದೆ.
ಸಿಟಿ ರವಿ ಅವರೆ, 2004-2010ರ ಮಧ್ಯೆ ನಿಮ್ಮ ಆಸ್ತಿ 49 ಲಕ್ಷದಿಂದ 3.18 ಕೋಟಿಗೆ ಏರಿಕೆಯಾಗಿದೆ ಎಂಬ ದೂರು ದಾಖಲಾಗಿತ್ತು. 2018ರಲ್ಲಿ ನೀವೇ ಘೋಷಿಸಿದ ಅಧಿಕೃತ ಆಸ್ತಿ 5 ಕೋಟಿಗೂ ಅಧಿಕ, ನಿಮ್ಮ ಕುಟುಂಬದ್ದು ಇನ್ನೂ ಅಧಿಕ, ಬೇನಾಮಿ ಅತ್ಯಧಿಕ! ಹಿಂದುತ್ವ ಜಪದಿಂದ ಈ ಪ್ರಮಾಣದ ಆಸ್ತಿ ಸಂಪಾದಿಸಬಹುದೇ ಲೂಟಿರವಿ ಅವರೇ? ಎಂದಿದೆ.
ಬಿಎಸ್ವೈ ಮೂಲೆಗುಂಪು :ಆಂತರಿಕ ಕಿತ್ತಾಟಕ್ಕೆ ಪೇಟೆಂಟ್ ಪಡೆದುಕೊಂಡಿರುವ ರಾಜ್ಯ ಬಿಜೆಪಿ ಹತ್ತಾರು ಬಣಗಳಾಗಿ ಬಣವೆಗೆ ಬೆಂಕಿ ಬಿದ್ದಂತಾಗಿದೆ! ಪರರ ಮನೆಯ ಇಣುಕುವ ಬದಲು ನಿಮ್ಮ ಮನೆಗೆ ಬಿದ್ದ ಬೆಂಕಿಯ ಆರಿಸಿಕೊಳ್ಳಿ. ಮೀರ್‌ಸಾದಿಕ್ ನಳಿನ್ ಕುಮಾರ್ ಕಟೀಲು ತಂಡ ಬಿ ಎಸ್ ಯಡಿಯೂರಪ್ಪ ಅವರನ್ನು ಹಾಗೂ ಅವರ ಬಣದವರನ್ನು ಮೂಲೆಗುಂಪು ಮಾಡುತ್ತಿರುವುದು ಜಗಜ್ಜಾಹೀರು ಎಂದು ದೂರಿದೆ.