ಬೆಂಗಳೂರು: ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಸರ್ಕಾರ ಯಾರಿಗೆ ಎಷ್ಟು ಜಮೀನು ಕೊಡಿಸಿದೆ ಎಂಬ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಸಂವಹನ ವಿಭಾಗ ಉಪಾಧ್ಯಕ್ಷರಾದ ರಮೇಶ್ ಬಾಬು ಜತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಘೋಷಣೆ ಆಗಿದ್ದು 6.77 ಲಕ್ಷ ಕೋಟಿ, ಹೂಡಿಕೆ ಆಗಿದ್ದು 54 ಸಾವಿರ ಕೋಟಿ. ಈಗ 2022ರಲ್ಲಿ ಘೋಷಣೆ ಆಗಿರುವುದು 9.98 ಲಕ್ಷ ಕೋಟಿ ಅದರಲ್ಲಿ ಮಾಡಿಕೊಂಡಿರುವ ಒಪ್ಪಂದ 2.83 ಲಕ್ಷ ಕೋಟಿ ಎಂದು ಹೇಳುತ್ತಿದ್ದು, 7 ಲಕ್ಷ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಸರ್ಕಾರ ಹೇಳುತ್ತಿದೆ. ಇದೆಲ್ಲವೂ ರಾಜಕೀಯ ಗಿಮಿಕ್ ಎಂದು ಆರೋಪಿಸಿದರು.
ಸರ್ಕಾರ ಶ್ವೇತಪತ್ರ ಹೊರಡಿಸಬೇಕು : ಈ ಬಂಡವಾಳ ಹೂಡಿಕೆದಾರರ ಕಾರ್ಯಕ್ರಮಕ್ಕಾಗಿ ಪ್ರಪಂಚದಾದ್ಯಂತ ಇವರು ಪ್ರಚಾರಕ್ಕಾಗಿ ಖರ್ಚು ಮಾಡಿರುವ ಹಣ 300 ಕೋಟಿ. ಭೂ ಬ್ಯಾಂಕ್ ಮೂಲಕ 1.5 ಲಕ್ಷ ಎಕರೆ ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ. ಈ ಹಿಂದೆಯೂ ಭೂ ಬ್ಯಾಂಕ್ ಎಂದು ಮಾಡಿ ಕೈಗಾರಿಕೆಗೂ ನೀಡಲಿಲ್ಲ, ಎಲ್ಲವೂ ರಿಯಲ್ ಎಸ್ಟೇಟ್ ಪಾಲಾಯಿತು. ದೇವನಹಳ್ಳಿ ಸುತ್ತಮುತ್ತ ಸಾವಿರಾರು ಎಕರೆಯನ್ನು ರೈತರಿಂದ ಕಸಿದು ರಿಯಲ್ ಎಸ್ಟೇಟ್ ನವರಿಗೆ ನೀಡಿದ್ದಾರೆ. ಸಚಿವ ಮುರುಗೇಶ್ ನಿರಾಣಿ ಅವರ ಪುತ್ರ ಈ ಕಾರ್ಯಕ್ರಮದಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಆ ಸಮಿತಿಯಲ್ಲಿ ಅವರು ಇದ್ದು, ಕಾರ್ಯಕ್ರಮದ ಆಯೋಜನೆಯಲ್ಲೂ ಅವರ ಪಾತ್ರವಿತ್ತು. ಸಚಿವರ ಪುತ್ರ ಎನ್ನುವುದು ಹೊರತಾಗಿ ಉಳಿದ ಯಾವುದೇ ಅರ್ಹತೆ ಅವರಿಗೆ ಇಲ್ಲವಾಗಿದೆ. ಅವರನ್ನು ಯಾಕೆ ಇದರಲ್ಲಿ ಭಾಗವಹಿಸಲು ಅವಕಾಶ ನೀಡಿ ಅವರ ಮೂಲಕ ಯಾರಿಗೆ ಎಷ್ಟು ಎಕರೆ ಜಮೀನು ಕೊಡಿಸಿದ್ದೀರಿ ಎಂದು ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳ ವಾಸ್ತವ್ಯಕ್ಕೆ ಸ್ಟಾರ್ ಹೋಟೇಲ್ ಗಳಿಗಾಗಿ 85 ಕೋಟಿಯಷ್ಟು ಖರ್ಚು ಮಾಡಿದ್ದಾರೆ. ಮೊನ್ನೆ ಪ್ರಧಾನಿ ಅವರು 4 ಗಂಟೆ ಆಗಮಿಸಿದ್ದಕ್ಕೆ ಜಾಹೀರಾತು ಹೊರತುಪಡಿಸಿ 48 ಕೋಟಿ ಖರ್ಚು ಮಾಡಲಾಗಿದೆ. ಇದು ಜನಸಾಮಾನ್ಯರ ಹಣವಾಗಿದೆ. ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ ಸರ್ಕಾರ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 144 ಪೊಲೀಸ್ ಠಾಣೆಗಳಿವೆ. 44 ಟ್ರಾಫಿಕ್ ಪೊಲೀಸ್ ಠಾಣೆಗಳಿವೆ. ಒಟ್ಟು 188 ಠಾಣೆಗಳಿವೆ. ಇವುಗಳಿಂದ ಭ್ರಷ್ಟಾಚಾರದ ಮೂಲಕ ಬರುತ್ತಿರುವ ಆದಾಯ ವಾರ್ಷಿಕವಾಗಿ 250 ಕೋಟಿ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಹುದ್ದೆಗೆ 1.50 ಕೋಟಿ. ಉಪ್ಪಾರಪೇಟೆ ಠಾಣೆಯಲ್ಲಿ 1.25 ಕೋಟಿ, ಬಸವೇಶ್ವರ ನಗರ 1 ಕೋಟಿ. ಕೇವಲ ವರ್ಗಾವಣೆ ಧಂದೆಯಲ್ಲಿ 188 ಪೊಲೀಸ್ ಠಾಣೆಗಳ ಮೂಲಕ 250 ಕೋಟಿ ವಸೂಲಿ ಮಾಡಲಾಗಿದೆ. ಈ ವಿಚಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಹಸ್ಯವಾಗಿ ನೀಡಿರುವ ಮಾಹಿತಿ ಎಂದು ಹೇಳಿದರು.
ಕಳೆದ ಮೂರುವರೆ ವರ್ಷಗಳಿಂದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾದ ನಂತರ ಸುಮಾರು 1 ಲಕ್ಷ ಕೋಟಿ ವಸೂಲಿ ಮಾಡಲಾಗಿದೆ. ಇದು ಹಾಲಿ 6 ಸಚಿವರು ಇಬ್ಬರು ಆಪ್ತರ ಬಳಿ ಈ ಹಣವಿದೆ. ಈ ವಿಚಾರವಾಗಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಇಡಿ ಅಥವಾ ಸಿಬಿಐ ಮೂಲಕ ತನಿಖೆ ನಡೆಸಬೇಕು. ಆದರೆ 8 ಜನರ ಹೆಸರನ್ನು ನಾವು ನೀಡುತ್ತೇವೆ ಎಂದು ಸವಾಲು ಹಾಕುತ್ತೇವೆ ಎಂದರು.