ಬೆಂಗಳೂರು:ಕೆಪಿಸಿಸಿಯ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳ ನೇಮಕ ಶೀಘ್ರವೇ ಆಗಲಿದೆ. ಈ ನಿಟ್ಟಿನಲ್ಲಿ ಸಭೆ ಸೇರಿ ಚರ್ಚೆ ಆರಂಭಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ತಿಳಿಸಿದರು.
ಈಟಿವಿ ಭಾರತ್ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ ಅವರು, ಪಕ್ಷದ ಹೈಕಮಾಂಡ್ ಸೂಚನೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿಯ ವಿವಿಧ ಸಮಿತಿಗಳನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದರು. ಆದರೆ ಪದಾಧಿಕಾರಿಗಳ ನೇಮಕವಾಗಿರಲಿಲ್ಲ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದ ಕಾರಣ ದಿನೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು ಎಂದರು.
ಮೂರು ತಿಂಗಳ ಹಿಂದೆಯೇ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹಾಗೂ ನಾವು ಕಾರ್ಯಾಧ್ಯಕ್ಷರಾಗಿ ನಿಯೋಜಿತವಾಗಿದ್ದೇವೆ. ಎಲ್ಲಾ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಸಕ್ರಿಯವಾಗಿ ಅಧ್ಯಕ್ಷರ ಜೊತೆ ಸಂಪರ್ಕದಲ್ಲಿದ್ದು, ಕಾರ್ಯನಿರ್ವಹಿಸುತ್ತಿದ್ದಾರೆ. ಆದಷ್ಟು ಬೇಗ ಕೆಪಿಸಿಸಿ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳ ಹಾಗೂ ಅಧ್ಯಕ್ಷರ ನೇಮಕ ಆಗಲಿದೆ. ಸದ್ಯ ಈ ನಿಟ್ಟಿನಲ್ಲಿ ಯಾವುದೇ ಸಭೆ ಇಲ್ಲವೇ ಚರ್ಚೆ ನಡೆದಿಲ್ಲ ಎಂದು ವಿವರಿಸಿದರು.
ಬೂತ್ ಹಾಗೂ ಪಂಚಾಯತ್ ಕಮಿಟಿಗಳು ಬೇಗ ಆಗಬೇಕು ಎಂಬ ನಿಟ್ಟಿನಲ್ಲಿ ಆದ್ಯತೆ ನೀಡಿ ಕಾರ್ಯನಿರ್ವಹಿಸಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದಂತೆ ಮೊದಲ ಆದ್ಯತೆಯಾಗಿ ಈ ಕಾರ್ಯ ಕೈಗೆತ್ತಿಕೊಳ್ಳಲಿದ್ದೇವೆ. ಅದಾದ ಬಳಿಕ ಕೆಪಿಸಿಸಿ ಸಮಿತಿಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ಆಗಲಿದೆ ಎಂದರು.