ಬೆಂಗಳೂರು: ಬಿಜೆಪಿ ಸರ್ಕಾರ ಮಾನವೀಯತೆ ಕಳೆದುಕೊಂಡಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ, ನವಜಾತ ಅವಳಿ ಶಿಶುಗಳ ಸಾವಿಗೀಡಾಗಿದ್ದ ಪ್ರಕರಣದಲ್ಲಿ ಯಾರೇ ಆಗಿದ್ದರೂ ಮಾನವೀಯತೆ ಮೆರೆಯಬೇಕು. ಆದರೆ ಈ ಸರ್ಕಾರದಲ್ಲಿ ಮಾನವೀಯತೆ ಹಣ ಕೊಟ್ಟವರಿಗೆ ಮಾತ್ರ ಸಿಗುತ್ತಿದೆ ಎಂದು ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ.
ಹಣ ಕೊಟ್ಟವರಿಗೆ ಪೋಸ್ಟಿಂಗ್:ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಹಣ ಕೊಟ್ಟವರಿಗೆ ಮಾತ್ರ ಪೋಸ್ಟಿಂಗ್ ನೀಡಲಾಗುತ್ತದೆ. ಹೀಗಾಗಿ ಅಧಿಕಾರಿ ಹಾಗೂ ಸಿಬ್ಬಂದಿ ಮಾನವೀಯತೆ ಮರೆತು ಹಣ ಗಳಿಸುವ ಕಡೆಗೆ ಗಮನಹರಿಸಿದ್ದಾರೆ. ಇಲ್ಲಿ ಗರ್ಭಿಣಿಗೆ ನೋವು ಇದ್ದು ಗೊತ್ತಿದ್ದರೂ ಕಾರ್ಡ್ ಕೊಡಿ, ಹಣ ಕೊಡಿ ಎಂದು ಹೇಳಿ ಚಿಕಿತ್ಸೆ ನೀಡಿಲ್ಲ. ಇದು ಸರ್ಕಾರದ ಪ್ರಾಯೋಜಿತ ಹತ್ಯೆ. ಇದಕ್ಕೆ ಕಾರಣ ಯಾರು? ಅಮಾನತುಗೊಳಿಸಿದರೆ ಸಾಕೇ? ಅವರ ಪರವಾನಿಗೆ ರದ್ದು ಮಾಡಬೇಕು. ವೈದ್ಯರು ವೃತ್ತಿ ಆರಂಭಿಸುವಾಗ ಮಾನವೀಯತೆ ಆಧಾರದ ಮೇಲೆ ಪ್ರತಿಜ್ಞೆ ಮಾಡಿರುತ್ತಾರೆ. ಅದನ್ನು ಮರೆತು ಇಂದು ಈ ರೀತಿ ಚಿಕಿತ್ಸೆ ತಿರಸ್ಕರಿಸಿದರೆ ಈ ಸರ್ಕಾರಕ್ಕೆ ಜೀವಕ್ಕೆ ಬೆಲೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಹರಿಹಾಯ್ದರು.