ಬೆಂಗಳೂರು: ನಗರದ ಕೆ.ಜಿ.ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗ ಏಕವಚನದಲ್ಲಿ ಮಾತನಾಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಷಾದ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಅವರು ಅಲಂಕರಿಸಿರುವ ಗೃಹ ಸಚಿವ ಸ್ಥಾನದ ಬಗ್ಗೆ ನಮಗೆ ಗೌರವವಿದೆ. ಉದ್ದೇಶಪೂರ್ವಕವಾಗಿ ಏಕವಚನ ಬಳಸಿಲ್ಲ. ಮಾತಿನ ಭರಾಟೆಯಲ್ಲಿ ಪ್ರಮಾದ ಉಂಟಾಗಿದೆ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಂದು ಬೆಳಗ್ಗೆ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ 74ನೇ ಸ್ವಾತಂತ್ರೋತ್ಸವ ಧ್ವಜಾರೋಹಣ ನೆರವೇರಿಸಿ, ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಂದರ್ಭ ಗೃಹ ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಯಾರು ಗೃಹ ಸಚಿವರು ಹೇಳುವುದಕ್ಕೆ, ಯಾರವನು, ಅಥಾರಿಟಿ ನಾ ? ಇನ್ಸ್ ಪೆಕ್ಟರಾ? ಅಥವಾ ಆಯೋಗವೇನಾದರೂ ರಚನೆಯಾಗಿದೆಯಾ? ನಮ್ಮ ಪಾಲಿಕೆಯ ಸದಸ್ಯರಿಗೆ ನೋಟಿಸ್ ಕೊಟ್ಟು, ಬೆದರಿಕೆ ಹಾಕುತ್ತಿದ್ದಾರಾ, ಈತ ಯಾರು? ನಮ್ಮ ಪಾಲಿಕೆ ಸದಸ್ಯರಿಗೆ ನೋಟಿಸ್ ಕೊಟ್ಟಿದ್ದಾರೆ. ನಾವು ಕಾಂಗ್ರೆಸ್ ಪಕ್ಷದವರು, ಈಗ ಸುಮ್ಮನಿರಲು ಸಾಧ್ಯವೇ? ಏನು ನಡೆಯುತ್ತಿದೆ ಎಂದು ಪ್ರಶ್ನಿಸಿದ್ದರು.
ಈ ಗಲಭೆಯಲ್ಲಿ ಗೃಹ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ. ತಪ್ಪ ಮುಚ್ಚಿಕೊಳ್ಳಲು ಈ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.