ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ನಿಯಂತ್ರಿಸುವ ಉದ್ದೇಶದಿಂದ ಅವರ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ.ಎಸ್ ಯಡಿಯೂರಪ್ಪನವರ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಅದರೆ ಅಧಿಕಾರಿಗಳು, ಸಂಬಂಧ ಪಟ್ಟವರು ಅಧಿಕೃತವಾಗಿ ಹೇಳಿಕೆ ನೀಡುವವರೆಗೂ ನಾನು ಏನೂ ಮಾತನಾಡುವುದಿಲ್ಲ. ಇದರ ಹಿಂದೆ ಒಳ ರಾಜಕೀಯ ಇದ್ದೇ ಇದೆ ಎಂದು ಶಂಕೆ ವ್ಯಕ್ತಪಡಿಸಿದರು.
ಬಿಎಸ್ವೈ ಆಪ್ತನ ಮೇಲಿನ ಐಟಿ ದಾಳಿ ಕುರಿತು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಕೆಲವು ಸಚಿವರು ದೆಹಲಿಗೆ ತೆರಳಿ ನಮ್ಮ ಮೇಲೆ ದಾಳಿ ಮಾಡಬೇಡಿ, ನಮ್ಮ ಸೋದರರ ಮನೆ ಮೇಲೆ ದಾಳಿ ಮಾಡಬೇಡಿ ಅಂತಾ ಕಾದು ಕುಳಿತಿರುವುದು ಗೊತ್ತಿದೆ. ನೀರಾವರಿ ಇಲಾಖೆಯಲ್ಲಿ ಯಾರು ಯಾರು ಹೋಟೆಲ್ನಲ್ಲಿ ಕುಳಿತು ಟೆಂಡರ್ ಬಗ್ಗೆ ಸಭೆ ಮಾಡಿದ್ದಾರೆ ಎಂಬುದು ನನಗೆ ತಿಳಿದಿದೆ. ಅವರ ಮೇಲೂ ಸಹ ದಾಳಿ ಆಗಬೇಕಲ್ವಾ?, ಅವರನ್ನು ಸಹ ವಿಚಾರಿಸಬೇಕಲ್ವಾ? ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಮಾತನಾಡಿದರು.
ಬಿಎಸ್ವೈ ನಿಯಂತ್ರಿಸಲು ಈ ದಾಳಿ ಮಾಡಲಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಯಾರು ಯಾರನ್ನು ಕಂಟ್ರೋಲ್ಗೆ ತಗಬೇಕು ಎಂಬ ಉದ್ದೇಶದಿಂದಲೇ ದಾಳಿ ಮಾಡಲಾಗುತ್ತಿದೆ. ಹೀಗಾಗಿ ಆಂತರಿಕ ರಾಜಕೀಯ ಬೇಕಾದಷ್ಟು ಇದ್ದೇ ಇರುತ್ತದೆ. ಕೆಲ ಸಚಿವರು ದೆಹಲಿಗೆ ಹೋಗಿ ನಮ್ಮ ಮನೆಗೆ ಬರಬೇಡಿ ಅಂತಾ ಹೇಳಿದ್ದಾರೆ. ಕೆಲವರ ರಕ್ಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕರು ಅಸ್ತಿತ್ವಕ್ಕಾಗಿ ಆರ್ಎಸ್ಎಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಅಶ್ವತ್ಥ್ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷರು, ಅವನಿಗೆ ಏನೋ ಹೆಚ್ಚು ಕಮ್ಮಿ ಆಗಿರಬೇಕು. ನಾನು ಹೇಳಿದ್ದು ಎನ್ ಇ ಪಿ ಬಗ್ಗೆ. ಪೋಷಕರು, ಶಿಕ್ಷಣ ತಜ್ಞರ ಜೊತೆ ಚರ್ಚೆ ಆಗಬೇಕಿತ್ತು. ತರಾತುರಿಯಲ್ಲಿ ಯಾಕೆ ತರಲು ಹೊರಟಿದ್ದಾರೆ. ಗುರುಕುಲ ವ್ಯವಸ್ಥೆ ಮಾಡಲು ಹೊರಟಿದ್ದಾರೆ. ಹಿಂದೆ ಇದ್ದ ಶಿಕ್ಷಣ ವ್ಯವಸ್ಥೆ ಸರಿಯಿಲ್ಲವಾ?, ಈ ಕುರಿತು ಕಲಾಪದಲ್ಲಿ ಚರ್ಚೆ ಮಾಡಬೇಕಿತ್ತು ಎಂದು ಅಶ್ವತ್ಥ್ ನಾರಾಯಣ್ಗೆ ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.