ಕರ್ನಾಟಕ

karnataka

ETV Bharat / state

ಸ್ಪರ್ಧಾತ್ಮಕ ಪರೀಕ್ಷೆ ಕನ್ನಡದಲ್ಲೇ ಬರೆಯಲು ಅವಕಾಶ ಮಾಡಿ ಕೊಡಿ : ಸರ್ಕಾರಕ್ಕೆ ಡಿಕೆಶಿ ಒತ್ತಾಯ - ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯ

ಕೇಂದ್ರ ಲೋಕಸೇವಾ ಆಯೋಗ ನಡೆಸಿವ ಐಎಎಸ್, ಐಪಿಎಸ್ ಮತ್ತಿತರ ನಾಗರಿಕ ಸೇವಾ ಪರೀಕ್ಷೆಗಳು, ಬ್ಯಾಂಕಿಂಗ್, ರೈಲ್ವೆ ಮತ್ತಿತರ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಎಲ್ಲ ಹಂತದಲ್ಲಿ ಕನ್ನಡ ಭಾಷೆಯಲ್ಲಿ ಬರೆದು ಪ್ರತಿಭೆಗೆ ತಕ್ಕಂತೆ ಅವಕಾಶಗಳು ಕನ್ನಡದ ಯುವಜನರಿಗೂ ಸಿಗಬೇಕು. ಇದು ಕನ್ನಡಿಗರ ರಾಜ್ಯಾಂಗಬದ್ದವಾದ ಹಕ್ಕು ಕೂಡ ಆಗಿದೆ ಎಂದು ಹೇಳಿದ್ದಾರೆ..

ಸರ್ಕಾರಕ್ಕೆ ಡಿಕೆಶಿ ಒತ್ತಾಯ
ಸರ್ಕಾರಕ್ಕೆ ಡಿಕೆಶಿ ಒತ್ತಾಯ

By

Published : Nov 1, 2021, 5:17 PM IST

ಬೆಂಗಳೂರು :ಕರ್ನಾಟಕವು ಒಕ್ಕೂಟ ವ್ಯವಸ್ಥೆಯ ಭಾಗವಾಗಿದೆ. ಕನ್ನಡವು ಸಂವಿಧಾನಬದ್ಧ ಭಾಷೆಯಾಗಿದ್ದರೂ ಕನ್ನಡ ಭಾಷೆಯಲ್ಲಿ ಎಲ್ಲ ಹಂತದ ಯುಪಿಎಸ್ಸಿ, ಬ್ಯಾಂಕಿಂಗ್‌ ಸೇರಿದಂತೆ ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ಬರೆಯಲು ಅವಕಾಶ ಸಿಗಬೇಕಾದ ಅಗತ್ಯವನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಪಾದಿಸಿದ್ದಾರೆ.

66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಡಿನ ಜನತೆಗೆ ಶುಭಾಶಯ ಕೋರಿರುವ ಡಿ.ಕೆ.ಶಿವಕುಮಾರ್, ಕನ್ನಡಿಗರ ಸ್ವಾಭಿಮಾನದ ದಿನವಾದ ಇಂದು ಆತ್ಮಾವಲೋಕನದ ಈ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ.

ನಾಡಿನ ಜ್ವಲಂತ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಜನಾಭಿಪ್ರಾಯ ಕ್ರೋಢೀಕರಣದ ಮೂಲಕ ಆಳುವ ಬಿಜೆಪಿ ಸರ್ಕಾರವನ್ನು ಎಚ್ಚರಿಸುವ, ಒತ್ತಾಯಿಸುವ ಪ್ರಯತ್ನ ನಡೆಸುತ್ತಿರುವ ಒಂದು ಪ್ರಶ್ನೆ ಸರಣಿಯ ಭಾಗವಾಗಿ ಡಿ.ಕೆ.ಶಿವಕುಮಾರ್ ಅವರು ಈ ವಾರ ಕನ್ನಡಿಗರ ಸ್ವಾಭಿಮಾನ ಹಾಗೂ ಹಿತರಕ್ಷಣೆಗೆ ಪೂರಕವಾದ ಈ ಪ್ರಶ್ನೆಯನ್ನು ಪ್ರಸ್ತಾಪಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯ ಭಾಗವಾಗಿ ಸಂವಿಧಾನಬದ್ದವಾದ ಕನ್ನಡ ಭಾಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅವಕಾಶ ಕನ್ನಡಿಗರ ಹಕ್ಕು. ಹಿಂದಿ, ಇಂಗ್ಲಿಷ್‌ನಂತೆ ಕೇಂದ್ರ ಸರ್ಕಾರ ನಡೆಸುವ ಎಲ್ಲ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯುವ, ಉದ್ಯೋಗ ಮತ್ತಿತರ ಸೌಲಭ್ಯಗಳನ್ನು ಬಳಸಿಕೊಳ್ಳುವ ಅವಕಾಶದ ವಿಚಾರವನ್ನು ಡಿ.ಕೆ.ಶಿವಕುಮಾರ್ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಹರಿಬಿಟ್ಟಿದ್ದಾರೆ.

ಹಿಂದಿ ಬಾರದ, ಆಂಗ್ಲ ಭಾಷೆ ಪರಿಣಿತಿ ಇಲ್ಲದ ಕಾರಣಕ್ಕೆ ಕನ್ನಡ ಭಾಷಿಕ ಪ್ರತಿಭಾವಂತ ಯುವಜನತೆ ಅವಕಾಶಗಳಿಂದ ವಂಚಿತರಾಗಬಾರದು. ಕನ್ನಡಕ್ಕೆ ಸೂಕ್ತ ಪ್ರಾತಿನಿಧ್ಯ ಇಲ್ಲದೆ ಬ್ಯಾಂಕಿಂಗ್ ಮತ್ತಿತರ ವ್ಯವಹಾರ ನಡೆಸಲು ಸಾರ್ವಜನಿಕರಿಗೆ ಅನಾನುಕೂಲ ಆಗಬಾರದು ಎಂಬುದು ಶಿವಕುಮಾರ್ ಅವರ ಕಳಕಳಿಯಾಗಿದೆ.

ಕೇಂದ್ರ ಲೋಕಸೇವಾ ಆಯೋಗ ನಡೆಸಿವ ಐಎಎಸ್, ಐಪಿಎಸ್ ಮತ್ತಿತರ ನಾಗರಿಕ ಸೇವಾ ಪರೀಕ್ಷೆಗಳು, ಬ್ಯಾಂಕಿಂಗ್, ರೈಲ್ವೆ ಮತ್ತಿತರ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಎಲ್ಲ ಹಂತದಲ್ಲಿ ಕನ್ನಡ ಭಾಷೆಯಲ್ಲಿ ಬರೆದು ಪ್ರತಿಭೆಗೆ ತಕ್ಕಂತೆ ಅವಕಾಶಗಳು ಕನ್ನಡದ ಯುವಜನರಿಗೂ ಸಿಗಬೇಕು. ಇದು ಕನ್ನಡಿಗರ ರಾಜ್ಯಾಂಗಬದ್ದವಾದ ಹಕ್ಕು ಕೂಡ ಆಗಿದೆ ಎಂದು ಹೇಳಿದ್ದಾರೆ.

ಇಂಗ್ಲಿಷ್‌, ಹಿಂದಿ ಬಾರದ ಕನ್ನಡಿಗರು ಬ್ಯಾಂಕ್‌ಗಳಲ್ಲಿ ವ್ಯವಹರಿಸಲು ಕಷ್ಟವಾಗಿದೆ. ಹಣ ಡ್ರಾ ಮಾಡುವುದೂ ಸೇರಿ ಎಲ್ಲ ಫಾರ್ಮ್‌ಗಳು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿರುವುದು ಇದಕ್ಕೆ ಕಾರಣ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಬಲ್ ಇಂಜಿನ್ ಬಿಜೆಪಿ ಸರ್ಕಾರದಲ್ಲಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸಿಗಬೇಕಾದ ಪ್ರಾತಿನಿಧ್ಯ, ಅವಕಾಶಗಳು ಸಿಗುತ್ತಿಲ್ಲ.

ಈ ಬಗ್ಗೆ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ 25 ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತುವ ಧೈರ್ಯ ತೋರುತ್ತಿಲ್ಲ ಎಂದು ಡಿ ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯೋತ್ಸವ ಸಂಭ್ರಮದ ಶುಭ ದಿನದಂದು ಈ ಎಲ್ಲ ವಿಚಾರಗಳ ಬಗ್ಗೆ ಆತ್ಮಾವಲೋಕನ ಮಾಡುವ ಅಗತ್ಯವನ್ನು ಶಿವಕುಮಾರ್ ಅವರು ನಾಡಿನ ಜನತೆಯ ಮುಂದಿಟ್ಟಿದ್ದಾರೆ. ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಸಾಮಾಜಿಕ ಜಾಲತಾಣಗಳ ಮೂಲಕ ಈ ಬಗ್ಗೆ ನಾಡಿನ ಜನರ ಪ್ರತಿಕ್ರಿಯೆಯನ್ನು ಕೆಪಿಸಿಸಿ ಅಧ್ಯಕ್ಷರು ನಿರೀಕ್ಷಿಸಿದ್ದಾರೆ.

ABOUT THE AUTHOR

...view details