ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ದಾರೆ.
ಶಿವಾನಂದ ವೃತ್ತ ಸಮೀಪದಲ್ಲಿರುವ ಸಿದ್ದರಾಮಯ್ಯನವರ ಸರ್ಕಾರಿ ನಿವಾಸಕ್ಕೆ ಆಗಮಿಸಿ ಡಿಕೆಶಿ ಮಾತುಕತೆ ನಡೆಸಿದ್ದರು. ಮೈಸೂರು ಮೇಯರ್ ವಿಚಾರದಲ್ಲಿ ಸಿದ್ದರಾಮಯ್ಯ, ಡಿಕೆಶಿ ನಡುವೆ ಮನಸ್ತಾಪವಾಗಿದ್ದ ವಿಚಾರ ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ಸಮಜಾಯಿಷಿ ನೀಡುವ ಉದ್ದೇಶದಿಂದ ಡಿಕೆಶಿ ಆಗಮಿಸಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಾಳೆ ಕಾಂಗ್ರೆಸ್ ಪಕ್ಷ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನಧ್ವನಿ ಹಮ್ಮಿಕೊಂಡಿದ್ದು, ಇದಕ್ಕೆ ಬೆಳಗ್ಗೆ 8.30ಕ್ಕೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಚಾಲನೆ ದೊರೆಯಲಿದೆ. ಇದರಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸುವ ಉದ್ದೇಶಕ್ಕೆ ಡಿಕೆಶಿ ಆಗಮಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ..ರಾಜ್ಯ ಸಚಿವರ ಸಿಡಿ ಪ್ರಕರಣ: RTI ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿದ್ದೇನು?
ಮೈಸೂರು ಮೇಯರ್ ಆಯ್ಕೆಯಲ್ಲಿ ಎದುರಾದ ಹಿನ್ನಡೆಯಿಂದ ಬೇಸರಗೊಂಡಿರುವ ಸಿದ್ದರಾಮಯ್ಯ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ನಾಳಿನ ರ‍್ಯಾಲಿ ಸಂದರ್ಭದಲ್ಲಿಯೂ ಅವರು ಅನುಪಸ್ಥಿತಿ ಆದರೆ ಕಾರ್ಯಕರ್ತರಿಗೆ ಬೇರೆ ಸಂದೇಶ ರವಾನೆಯಾಗಲಿದೆ. ಪಕ್ಷದಲ್ಲಿ ಒಗ್ಗಟ್ಟು ಇಲ್ಲ ಎಂಬ ಮಾತು ಕೇಳಿ ಬರುವ ಸಾಧ್ಯತೆ ಇರುವ ಹಿನ್ನೆಲೆ ಸಿದ್ದರಾಮಯ್ಯ ಮನವೊಲಿಸಲು ಡಿಕೆಶಿ ಈ ಸಂದರ್ಭ ಪ್ರಯತ್ನ ನಡೆಸಲಿದ್ದಾರೆ ಎನ್ನಲಾಗಿದೆ.