ಬೆಂಗಳೂರು:ರಾಜ್ಯದ ಜನರಿಗೆ ಉಚಿತವಾಗಿ ಲಸಿಕೆ ನೀಡಲು ಕಾಂಗ್ರೆಸ್ ರೂಪಿಸಿರುವ 100 ಕೋಟಿ ರೂ. ಯೋಜನೆಗೆ ಸರ್ಕಾರ ಅನುಮತಿ ನೀಡಲಿ. ನಾವೂ ಸರ್ಕಾರದ ಜತೆ ಕೈ ಜೋಡಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 'ಜನರ ಜೀವ ಉಳಿಸುವುದು ಮುಖ್ಯ. ಅದೇ ನಮ್ಮ ಮೊದಲ ಆದ್ಯತೆ. ಅಭಿವೃದ್ಧಿ ಕಾರ್ಯಗಳನ್ನು ನಂತರ ಮಾಡಿಕೊಳ್ಳೋಣ. ಈ ಕಾರಣಕ್ಕೆ ಕಾಂಗ್ರೆಸ್ ನಾಯಕರೆಲ್ಲರೂ ಸೇರಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಹಣವನ್ನು ಲಸಿಕೆಗೆ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದರು.
ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ. ಶಾಸಕರ ನಿಧಿಯ 2 ಕೋಟಿ ರುಪಾಯಿಯಲ್ಲಿ ಶೇ.25 ರಷ್ಟು ಅನುದಾನ ಬಳಸಿಕೊಳ್ಳಲು ಸರ್ಕಾರ ಹೇಳಿದೆ. ಹಾಸಿಗೆ, ವೆಂಟಿಲೇಟರ್ ಖರೀದಿಗೆ ಬಳಸಲು ಅನುಮತಿ ಇದೆ. ಹೀಗಾಗಿ ನಾವು 100 ಕೋಟಿ ಮೊತ್ತದ ಕಾರ್ಯಕ್ರಮ ರೂಪಿಸಿ, ಸರ್ಕಾರದ ಅನುಮತಿ ಕೋರಿದ್ದೇವೆ. ನಮ್ಮಲ್ಲಿ ಒಟ್ಟು 93 ಶಾಸಕರು ಹಾಗೂ ಪರಿಷತ್ ಸದಸ್ಯರಿದ್ದು, ಉಳಿದ ಮೊತ್ತವನ್ನು ನಮ್ಮ ಕಾರ್ಯಕರ್ತರ ಬಳಿ ಭಿಕ್ಷೆ ಎತ್ತಾದರೂ ಸಂಗ್ರಹಿಸುತ್ತೇವೆ. ಈ ಜನಪರ ಕೆಲಸಕ್ಕೆ ಸರ್ಕಾರ ಅನುಮತಿ ನೀಡಲಿ. ನಾವು ಕೂಡ ಸರ್ಕಾರದ ಜತೆ ಕೈ ಜೋಡಿಸಿ ಜನಸೇವೆ ಮಾಡುತ್ತೇವೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಭೇಟಿ
ಇಂದು ಬೆಳಗ್ಗೆ ಶಿವಾನಂದ ವೃತ್ತದ ಸಮೀಪವಿರುವ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೆಲಕಾಲ ಚರ್ಚಿಸಿದರು. ಕಾಂಗ್ರೆಸ್ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಸರ್ಕಾರ ಅನುಮತಿ ಕೊಡದಿರುವ ಬಗ್ಗೆ ಉಭಯ ನಾಯಕರು ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಇಬ್ಬರೂ ನಾಯಕರು ಒಟ್ಟಾಗಿ ಕೋಲಾರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ತೆರಳಿದ್ದಾರೆ.