ಬೆಂಗಳೂರು :ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರವಾಗಿ ಸದನದಲ್ಲಿ ಚರ್ಚೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರೂ ಅದಕ್ಕೆ ಅವಕಾಶ ಕೊಟ್ಟಿಲ್ಲ. ಶಿಕ್ಷಣ ನೀತಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಇದರ ಜಾರಿಗೆ ನಾವು ಅವಕಾಶ ನೀಡುವುದಿಲ್ಲ.
ಒಂದೊಮ್ಮೆ ರಾಜ್ಯ ಸರ್ಕಾರ ಇದನ್ನು ಜಾರಿಗೊಳಿಸಿದ್ದೇ ಆದರೆ, ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ನಾವಿದನ್ನು ಹಿಂಪಡೆಯುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರುತ್ತಿದೆ. ಬಿಜೆಪಿ ಆಡಳಿತದಲ್ಲಿರುವ ಯಾವ ರಾಜ್ಯದಲ್ಲೂ ಇದು ಅನುಷ್ಠಾನಗೊಳ್ಳುತ್ತಿಲ್ಲ. ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವರು ಈ ನೀತಿಯ ಅನುಷ್ಠಾನ ಕ್ಲಿಷ್ಟವಾಗಿದ್ದು, ಅದರ ಅಧ್ಯಯನ ನಡೆಯಬೇಕು ಎಂದು ಹೇಳಿದ್ದಾರೆ.
ಎನ್‌ಇಪಿ ವಿರುದ್ಧ ವಿಧಾನಸೌಧದಲ್ಲಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿರುವುದು.. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡೋಣ, ಇದರಲ್ಲಿ ಏನೆಲ್ಲಾ ಪ್ರಯೋಜನವಾಗಲಿದೆ ಎಂಬುದನ್ನು ಸ್ಪಷ್ಟಪಡಿಸಿ ಎಂದೆವು. ಅದನ್ನು ಬಿಟ್ಟು ಜಾರಿಗೆ ಮುಂದಾಗಿದ್ದಾರೆ. ಇವರು ಆರ್ಎಸ್ಎಸ್ ಅಜೆಂಡಾ, ನಾಗ್ಪುರ ಅಜೆಂಡಾಗಳನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳಲಿ. ಬೇಕಾದರೆ ತಮ್ಮದೇ ಸ್ವಂತ ಸಂಸ್ಥೆಗಳನ್ನು ಮಾಡಿಕೊಂಡು ಬೋಧನೆ ಮಾಡಿಕೊಳ್ಳಲಿ. ಇದು ನಮ್ಮ ಮಕ್ಕಳ ಶಿಕ್ಷಣದ ಪ್ರಶ್ನೆ ಎಂದರು.
ಈಗ ಇರುವ ಶಿಕ್ಷಣ ನೀತಿಯನ್ನು ಜಾರಿಗೆ ತರುವಾಗ ವಾಜಪೇಯಿ ಅವರು ಯಾಕೆ ವಿರೋಧ ಮಾಡಲಿಲ್ಲ? ಬೇರೆ ಮಾಜಿ ಪ್ರಧಾನಿಗಳು ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ. ಇಷ್ಟು ದಿನ ನೀವು, ನಿಮ್ಮ ಮಕ್ಕಳು ಇದೇ ಶಿಕ್ಷಣ ನೀತಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಇದನ್ನು ಬದಲಾವಣೆ ಮಾಡುವುದು ಸರಿಯಲ್ಲ. ಇದು ರಾಜ್ಯಗಳಿಗೆ ಸಂಬಂಧಿಸಿದ ವಿಚಾರ.
ಕೇಂದ್ರ ಸರ್ಕಾರ ಮಕ್ಕಳು ಸಂಸ್ಕೃತ ಓದಬೇಕು. ಹಿಂದಿ ಕಲಿಯಬೇಕು ಎಂದು ಹೇಳುವುದು ಸರಿಯಿಲ್ಲ. ಇವರು ಈ ಶಿಕ್ಷಣ ನೀತಿ ಜಾರಿಗೆ ತಂದರೆ ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನಾವು ಇವುಗಳನ್ನು ಹಿಂಪಡೆಯುತ್ತೇವೆ ಎಂದು ಹೇಳಿದರು.
ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಬೇಕು ಎಂದು ಕೇಳಿದೆವು. ಆದರೆ, ಇದಕ್ಕೆ ಅವಕಾಶ ಕೊಟ್ಟಿಲ್ಲ. ಈ ನೀತಿ ಜಾರಿಗೆ ತರಲು ಆ ಮಂತ್ರಿ ಡೋಂಗಿ ಕೆಲಸ ಮಾಡುತ್ತಿದ್ದಾನೆ. ಈ ಶಿಕ್ಷಣ ನೀತಿ ಜಾರಿಗೆ ತರಲು ಅವರದೇ ಸಂಪುಟದ ಸಚಿವರಿಗೆ, ಸರ್ಕಾರಕ್ಕೆ ಇಷ್ಟವಿಲ್ಲ. ಕೇವಲ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಹೊರಟಿದ್ದಾರೆ.
ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಗುಜರಾತ್‌ನಲ್ಲಿ ಈ ಶಿಕ್ಷಣ ನೀತಿ ಜಾರಿಗೊಳಿಸಲಿ. ನಮ್ಮ ರಾಜ್ಯದಲ್ಲಿ ಈ ನೀತಿ ಜಾರಿಗೆ ಅವಕಾಶ ನೀಡುವುದಿಲ್ಲ. ಇದು ನಮ್ಮ ಮಕ್ಕಳ ಭವಿಷ್ಯದ ವಿಚಾರ, ನಾವಿದನ್ನು ವಿರೋಧಿಸುತ್ತೇವೆ. ಈ ಶಿಕ್ಷಣ ನೀತಿ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇಲ್ಲ.
ಈಗ ಇರುವುದು ಇಟಲಿ ಶಿಕ್ಷಣ ನೀತಿಯಾಗಿದ್ದರೆ, ವಾಜಪೇಯಿ ಅವರು ಬದಲಾವಣೆ ಮಾಡಬಹುದಿತ್ತಲ್ಲ. ಯಾಕೆ ಮಾಡಲಿಲ್ಲ? ಈಗ ಇರುವ ಶಿಕ್ಷಣ ನೀತಿ ಸರಿ ಇಲ್ಲವೇ? ಇಲ್ಲಿ ಶಿಕ್ಷಣ ಪಡೆದ ಇಂಜಿನೀಯರ್, ಡಾಕ್ಟರ್‌ಗಳು ವಿಶ್ವವಿಖ್ಯಾತಿ ಪಡೆದಿಲ್ಲವೇ? ಈ ರೀತಿ ಶಕ್ತಿ ತುಂಬಿರುವ ಶಿಕ್ಷಣ ನೀತಿ ನಮ್ಮ ಬಳಿ ಇದೆ. ಹೀಗಾಗಿ, ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.