ಬೆಂಗಳೂರು: ಜನರಿಗೆ ಮೊದಲು ಆದಾಯ ಬರುವ ಕೆಲಸ ನೀಡಿ ನಂತರ ರಾಜ್ಯ ಸರ್ಕಾರ ಬೆಲೆ ಏರಿಕೆಗೆ ಮುಂದಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಲಹೆ ನೀಡಿದರು.
ರಾಜ್ಯದಲ್ಲಿ ನೀರು, ವಿದ್ಯುತ್, ಹಾಲು, ಸಾರಿಗೆ ಹೆಚ್ಚಳ ಪ್ರಸ್ತಾಪ ವಿಚಾರವಾಗಿ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನರಿಗೆ ಮೊದಲು ಆದಾಯ ಸಿಗುವ ಕೆಲಸ ಮಾಡ್ಲಿ. ಆದಾಯ ಬರುವ ಕೆಲಸ ಮಾಡಿ ಆಮೇಲೆ ದರ ಏರಿಕೆ ಮಾಡ್ಲಿ. ಜನರಿಗೆ ಆದಾಯ ಇಲ್ಲದೇ ಲಾಕ್ಡೌನ್, ಸೀಲ್ಡೌನ್ ಮಾಡಿದ್ರು. ಕಡಿಮೆ ಕೇಸ್ ಇದ್ದಾಗ ಕರ್ಫ್ಯೂ ಮಾಡಿದ್ರು. ಕೇಸ್ ಹೆಚ್ಚಿದಾಗ ಕರ್ಫ್ಯೂ ತೆಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ನಷ್ಟ ಅನುಭವಿಸಿದ್ರು. ಸರ್ಕಾರದಿಂದ ಏನಾದರೂ ಕೊಟ್ರಾ?, ಕೊಡಲಿಲ್ಲ. ಅವನ ರಕ್ಷಣೆಗೆ ಯಾಕೆ ಬರಲಿಲ್ಲ?, ಸಿಮೆಂಟ್, ಕಬ್ಬಿಣ ರೇಟ್ ಕಡಿಮೆ ಮಾಡಲು ಪ್ರಯತ್ನ ಮಾಡಿದ್ರಾ? ಎಂದು ವಾಗ್ದಾಳಿ ನಡೆಸಿದರು. ಪಾದಯಾತ್ರೆ ಕಾರಣಕ್ಕೆ ಕರ್ಫ್ಯೂ ಜಾರಿಗೆ ತಂದ್ರು. ಜನರಿಗೆ ಬಹಳ ನಷ್ಟ ಆಗುವ ರೀತಿ ನಡೆದುಕೊಂಡ್ರು. ಸರ್ಕಾರ ಪ್ರಾಯೋಗಿಕವಾಗಿ ಯೋಜನೆ ಜಾರಿ ಮಾಡಲಿ. ಅವೈಜ್ಞಾನಿಕ ನಿಯಮ ಬೇಡ.
ಲಂಡನ್ನಲ್ಲಿ ಎಲ್ಲವೂ ಫ್ರೀ ಬಿಟ್ಟಿಲ್ಲವಾ?. ಆಂಧ್ರ, ತೆಲಂಗಾಣದಲ್ಲಿ ಯಾವುದೇ ಕರ್ಫ್ಯೂ ಇಲ್ಲ. ಇಲ್ಲಿ ಯಾಕೆ ಕರ್ಫ್ಯೂ ಜಾರಿ ಮಾಡಿದ್ದಾರೆ. ಜನರಿಗೆ ತೊಂದರೆ ಕೊಡುವುದನ್ನ ಮೊದಲು ನಿಲ್ಲಿಸಿ. 50-50 ರೂಲ್ಸ್ ಯಾಕೆ?, ಅದರಿಂದ ಎಷ್ಟು ಜನರಿಗೆ ಅನಾನುಕೂಲ ಆಗ್ತಿದೆ. ಮೊದಲು ಜನರಿಗೆ ಆದಾಯ ಬರುವಂತೆ ಮಾಡಿ, ಬಳಿಕ ದರ ಏರಿಕೆ ಮಾಡಲಿ ಎಂದರು.