ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣ ಹಾಗೂ ಅದರಿಂದಾಗುವ ಪ್ರತಿಕೂಲ ಪರಿಸ್ಥಿತಿ ನಿವಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಕೊರೊನಾ ಪರಿಸ್ಥಿತಿ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಮಹಾಮಾರಿಯಾಗಿ ಕಾಡುತ್ತಿದೆ. ಇದನ್ನು ಎಲ್ಲರೂ ಒಟ್ಟಾಗಿ ಎದುರಿಸಬೇಕು. ಈಗಾಗಲೇ ಇದರಿಂದ ಸಾಕಷ್ಟು ನಷ್ಟವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಇದೇ ಬಜೆಟ್ನಲ್ಲಿ ಈ ಪ್ಯಾಕೇಜ್ ಘೋಷಣೆ ಮಾಡಬೇಕು. ದಿನೇ ದಿನೆ ಕೊರೊನಾ ತೀವ್ರತೆ ದೊಡ್ಡದಾಗುತ್ತಿದೆ. ದೇಶದಲ್ಲಿ 250ಕ್ಕೂ ಹೆಚ್ಚು ಮಂದಿ ಸೋಂಕಿತರಾದರೆ ರಾಜ್ಯದಲ್ಲಿ 20 ಮಂದಿ ಸೋಂಕಿತರಿದ್ದಾರೆ. ಈಗ ಘೋಷಿಸಿರುವ ಯೋಜನೆಗಳಲ್ಲಿ ಯಾವುದರಲ್ಲಾದರೂ ಕಡಿಮೆ ಮಾಡಿ ಈ ತುರ್ತು ಪರಿಸ್ಥಿತಿ ನಿಭಾಯಿಸಲು ಮುಂದಾಗಬೇಕು. ಇದಕ್ಕೆ ನಾವು ಬೆಂಬಲ ನೀಡುತ್ತೇವೆ. ಪಕ್ಕದ ಕೇರಳ ರಾಜ್ಯದಲ್ಲಿ 20 ಸಾವಿರ ಕೋಟಿ ಪ್ಯಾಕೇಜ್ ಬಿಡುಗಡೆ ಮಾಡಲಾಗಿದ್ದು, ನಮ್ಮ ರಾಜ್ಯದ ಭೌಗೋಳಿಕ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಪ್ಯಾಕೇಜ್ ಘೋಷಣೆಯಾಗಬೇಕಿದೆ ಎಂದರು.
ಸರ್ಕಾರ ಸಾಮಾನ್ಯ ಜನರ ಪರವಾಗಿ ನಿಲ್ಲಬೇಕಿದೆ. ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲವಾಗಿದೆ. ರೇಷ್ಮೆ ಬೆಲೆ ಕುಸಿದಿದೆ. 600 ಇದ್ದ ಬೆಲೆ 200ಕ್ಕೆ ಕುಸಿದಿದೆ. ಇದೇ ರೀತಿ ತರಕಾರಿ ಸೇರಿದಂತೆ ಎಲ್ಲಾ ಬೆಳೆಗಳ ಬೆಲೆ ಕುಸಿದಿದೆ. ಕುಕ್ಕುಟೋದ್ಯಮ, ಹೈನೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ರಸ್ತೆ ವ್ಯಾಪಾರಿಗಳಿಂದ ದೊಡ್ಡ ಉದ್ದಿಮೆವರೆಗೂ ಪ್ರತಿಯೊಬ್ಬರಿಗೂ ಪೆಟ್ಟು ಬಿದ್ದಿದೆ. ಸಾಮಾನ್ಯ ಜನರು, ಕಾರ್ಮಿಕರು ಹಾಗೂ ಅವರಿಗೆ ಉದ್ಯೋಗ ನೀಡಿರುವ ಉದ್ದಿಮೆದಾರರು ಎಲ್ಲರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ವಿನಮ್ರ ಮನವಿ ಮಾಡುತ್ತೇನೆ. ಮೊದಲು ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರವ್ಯಾಪಿ ನಷ್ಟದ ಕುರಿತು ಸರ್ವೆ ನಡೆಸಬೇಕು. ಇನ್ನು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿಕೊಂಡರೆ ಕಷ್ಟ. ಖಾಸಗಿ ಆಸ್ಪತ್ರೆಗಳ ಜತೆ ಕೈಜೋಡಿಸಬೇಕು. ವೈದ್ಯರು ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನು ಬಳಸಿಕೊಳ್ಳಬೇಕು. ಈ ವಿಚಾರದಲ್ಲಿ ಸಮರೋಪಾದಿಯಲ್ಲಿ ಕಾರ್ಯವಾಗಬೇಕು ಎಂದಿದ್ದಾರೆ.
ಕೊರೊನಾ ಪರಿಸ್ಥಿತಿ ನಿರ್ವಹಣೆ ವಿಚಾರದಲ್ಲಿ ಈಗ ತಡವಾಗಿದೆಯೋ ಅಥವಾ ಬೇಗವಾಗಿದೆಯೋ ಗೊತ್ತಿಲ್ಲ. ಒಟ್ಟಾರೆ ಎಲ್ಲರೂ ಒಗ್ಗಟ್ಟಿನಿಂದ ಇದನ್ನು ಎದುರಿಸಬೇಕಿದೆ. ಪ್ರಧಾನಿ ಅವರು ಮೊನ್ನೆ ಭಾಷಣ ಮಾಡಿ ಸ್ವಯಂ ಕರ್ಫ್ಯೂ ಜಾರಿಗೆ ಕರೆ ನೀಡದ್ದಾರೆ. ಅದಕ್ಕೆ ನಮ್ಮ ಬೆಂಬಲವಿದೆ. ನಾವೂ ಕೂಡ ಈ ಕುರಿತ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಸೋಂಕು ನಿಯಂತ್ರಣಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಕಾಂಗ್ರೆಸ್ ಪಕ್ಷ ನೀಡಲಿದೆ. ಸರ್ಕಾರದ ಜೊತೆ ಜನರೂ ಕೂಡ ಕೈ ಜೋಡಿಸಬೇಕು ಎಂದು ಕರೆ ನೀಡಿದರು. ಈ ಮಧ್ಯೆ ಸೋಂಕು ನಿಯಂತ್ರಿಸಲು ಜನರು ಸ್ವಯಂ ಪ್ರೇರಿತರಾಗಿ ನಿರ್ಬಂಧ ಹಾಕಿಕೊಳ್ಳುವುದರಿಂದ ಅವರಿಗೆ ಆಗುವ ನಷ್ಟವನ್ನು ನಿವಾರಿಸಬೇಕು. ಫಲಾನುಭವಿಗಳಿಗೆ ಮುಂಚಿತವಾಗಿ ಎರಡು ತಿಂಗಳ ಪಿಂಚಣಿ ನೀಡಬೇಕು. ಜನರಿಗೆ ದಿನಸಿ ಸೇರಿದಂತೆ ದಿನನಿತ್ಯದ ಬಳಕೆ ವಸ್ತುಗಳ ಪೂರೈಕೆಯಾಗಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಅಂತಾ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬರಬೇಕು. ಇನ್ನು ಬ್ಯಾಂಕ್ ಸಾಲದ ಬಡ್ಡಿ, ಇಎಂಐ ಕಟ್ಟಲು ಕಾಲಾವಕಾಶ ನೀಡಬೇಕು. ಈಗಾಗಲೇ ಬ್ಯಾಂಕ್, ಐಟಿ, ಜಿಎಸ್ಟಿ ಒತ್ತಡ ಹಾಕಲಾಗುತ್ತಿದೆ. ಈ ಕೂಡಲೇ ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬೇಕಿದೆ ಎಂದರು. ಇನ್ನು ನನಗೆ ಅಭಿನಂದನೆ ಸಲ್ಲಿಸೋಕೆ ಬೆಂಬಲಿಗರು, ಕಾರ್ಯಕರ್ತರು ಬರುತ್ತಿದ್ದಾರೆ. ಇದರಿಂದ ನನ್ನ ಮೇಲೂ ಒತ್ತಡ ಬೀಳುತ್ತಿದೆ. ಕಾರ್ಯಕರ್ತರು ಮುಂದಿನ ಒಂದು ವಾರಗಳ ಕಾಲ ಬರುವುದು ಬೇಡ ಎಂದು ಮನವಿ ಮಾಡಿಕೊಳ್ಳುತ್ತೇನೆ. ನೀವು ನಿಮ್ಮ ಸ್ಥಳಗಳಲ್ಲಿಯೇ ಇದ್ದರೆ ಉತ್ತಮ. ಆಗ ಮಾತ್ರ ಸೋಂಕು ತಡೆಯಲು ಸಾಧ್ಯ. ಈ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದರು.