ಬೆಂಗಳೂರು: ಸಮಾಜ ಸುಧಾರಕ ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕಡೆಯ ಕ್ಷಣದಲ್ಲಾದರೂ ಅವಕಾಶ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಕೇಂದ್ರ ಸರ್ಕಾರದ ನಡೆ ನಿರಾಸೆಯನ್ನುಂಟು ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಪರೇಡ್ನಲ್ಲಿ ನಾರಾಯಣಗುರು ಟ್ಯಾಬ್ಲೊ ಪ್ರದರ್ಶನಕ್ಕೆ ಅವಕಾಶ ಸಿಗುವ ನಿರೀಕ್ಷೆ ಕಡೆಯ ಕ್ಷಣದವರೆಗೂ ಇತ್ತು. ನಾರಾಯಣ ಗುರು ಅವರ ಸ್ತಬ್ಧಚಿತ್ರ ದಿಲ್ಲಿ ತಲುಪಿತ್ತು. ಆದರೆ ಕೇಂದ್ರ ಸರ್ಕಾರ ಇದಕ್ಕೆ ಕೊನೆಯವರೆಗೂ ಅವಕಾಶ ನೀಡದೆ ದಕ್ಷಿಣ ಭಾರತದ ಪ್ರಮುಖ ಸಮಾಜ ಸುಧಾರಕನಿಗೆ ಅವಮಾನಿಸಿದೆ. ಇಂದು ಮಂಗಳೂರಿನಲ್ಲಿ ಸ್ವಾಭಿಮಾನದ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಾನು ಸಹ ಅಲ್ಲಿಗೆ ತೆರಳಬೇಕಿತ್ತು. ಆದರೆ ಕಡೆ ಕ್ಷಣದಲ್ಲಿ ಕಾರ್ಯಕ್ರಮವನ್ನು ರದ್ದುಪಡಿಸಿದ್ದೇನೆ. ನಾನು ತೆರಳುವುದರಿಂದ ಕಾರ್ಯಕ್ರಮಕ್ಕೆ ರಾಜಕೀಯ ತಿರುವು ಸಿಗಬಹುದು. ಅಂತಹ ಕಾರ್ಯ ಆಗದಿರಲಿ ಎಂಬ ಕಾರಣಕ್ಕೆ ನಿರ್ಧಾರ ಬದಲಿಸಿದ್ದೇನೆ. ರಾಜ್ಯದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಡಿಕೆಶಿ ಹೇಳಿದ್ರು.
ಇವತ್ತು ಹಿರಿಯರನ್ನ ಸ್ಮರಿಸಿಕೊಳ್ಳುವ ವಿಶೇಷ ದಿನ. ದಕ್ಷಿಣ ಭಾರತದಲ್ಲಿ ಎಲ್ಲ ವರ್ಗದ ಜನರಿದ್ದಾರೆ. ಎಲ್ಲ ವರ್ಗದವರಿಗೆ ಇಂದು ದುಃಖದ ದಿನ, ಸಮಾಜವನ್ನ ಒಟ್ಟು ಮಾಡಬೇಕೆಂಬ ಪ್ರಯತ್ನ ಮಾಡಿದ್ದರು. ಹಿಂದೆ ಸಮಾಜ ಸುಧಾರಕರು ಮಾಡಿದ್ದರು. ಧರ್ಮಕ್ಕೆ ಅದರದ್ದೇ ಆದ ಘನತೆಯಿದೆ. ನಾರಾಯಣ ಗುರು ನಮ್ಮ ದಕ್ಷಿಣ ಭಾರತದಲ್ಲಿ ಸುಧಾರಣೆ ತಂದವರು, ಜನರ ಭಾವನೆ, ನೋವು, ಶೋಷಣೆ ಬಗ್ಗೆ ಚಳವಳಿ ಮಾಡಿದ್ರು. ಅವರು ಜಾತಿಯ ಮೇಲೆ ನಿಲ್ಲಲಿಲ್ಲ. ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರ ಕಲ್ಪನೆ ತಂದವರು. ಅದು ಮಾನವ ಜಾತಿ ಎಂದು ಹೋರಾಟ ಮಾಡಿದ್ದರು. ಅದನ್ನ ಎಲ್ಲರೂ ಒಪ್ಪಿಕೊಂಡಿದ್ದರು ಎಂದರು.