ಬೆಂಗಳೂರು: ಕಾಂಗ್ರೆಸ್ ಪಕ್ಷದ ಎಲ್ಲ ಹಿರಿಯ ನಾಯಕರ ಸಭೆ ಕರೆದು ಪಕ್ಷ ಹಾಗೂ ರಾಜ್ಯ ಸರ್ಕಾರದ ಆಗು-ಹೋಗುಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದಲ್ಲಿ ರಾಷ್ಟ್ರಧ್ವಜಕ್ಕೆ ಆಗುತ್ತಿರುವ ಅಪಮಾನ, ರಾಷ್ಟ್ರಧ್ವಜದ ಬಗ್ಗೆ ಬಿಜೆಪಿ ನಾಯಕರು, ಸಚಿವರು ಆಡಿರುವ ಮಾತಿನ ಬಗ್ಗೆ ಜನರು ಬಹಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರ ಇದುವರೆಗೂ ಸಚಿವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿಲ್ಲ. ಅವರ ರಾಜೀನಾಮೆ ಪಡೆದಿಲ್ಲ. ರಾಜ್ಯಪಾಲರು ಸಚಿವರನ್ನು ವಜಾ ಮಾಡಬೇಕಿತ್ತು ಅಥವಾ ಮುಖ್ಯಮಂತ್ರಿಗಳು ಅವರ ರಾಜೀನಾಮೆ ಪಡೆಯಬೇಕಿತ್ತು. ಇವೆರಡೂ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಯೊಂದು ಜಾತಿ, ಧರ್ಮಕ್ಕೂ ಅವರದ್ದೇ ಆದ ಉಡುಗೆ, ತೊಡುಗೆಗೆ ಸಂವಿಧಾನದಲ್ಲಿ ಹಕ್ಕು ನೀಡಲಾಗಿದೆ. ಫೆ.5 ಕ್ಕೂ ಮುನ್ನ ರಾಜ್ಯದಲ್ಲಿ ಸಮವಸ್ತ್ರ ಕುರಿತ ಕಾನೂನು ಇತ್ತು. ಆದರೆ 5 ರ ನಂತರ ಬದಲಾವಣೆ ಮಾಡಿ ಗೊಂದಲ ಸೃಷ್ಟಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಕ್ಕಳನ್ನು ತಪ್ಪು ದಾರಿಗೆ ಎಳೆಯುವ, ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡುವ ಪ್ರಯತ್ನ ನಡೆದಿದೆ. ನಮ್ಮ ಆದ್ಯತೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು, ದೇಶದಲ್ಲಿ ಐಕ್ಯತೆ, ಸಮಗ್ರತೆ, ಶಾಂತಿ ಕಾಪಾಡಬೇಕು ಎಂಬುದಾಗಿದೆ. ಕಾಂಗ್ರೆಸ್ ಈ ಜವಾಬ್ದಾರಿ ತೆಗೆದುಕೊಂಡು, ನೊಂದ ಸಮುದಾಯಕ್ಕೆ ಧ್ವನಿಯಾಗಿ ನಿಲ್ಲಲಿದೆ. ಎಲ್ಲ ಧರ್ಮದವರಿಗೂ ಅವರ ಧರ್ಮ ರಕ್ಷಣೆಗೆ ಅವಕಾಶ ನೀಡಬೇಕು ಎಂಬುದು ಕಾಂಗ್ರೆಸ್ನ ಸ್ಪಷ್ಟ ನಿಲುವು ಎಂದರು.