ಬೆಂಗಳೂರು:ಕೊರೊನಾ ನಿಯಂತ್ರಣ ವಿಚಾರದಲ್ಲಿ ರಾಜ್ಯ ಸರ್ಕಾರ ಮಾಡಿರುವ ಖರ್ಚಿನ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಒತ್ತಡದ ಸಲುವಾಗಿ ಸರ್ಕಾರ ಕೊರೊನಾ ವಿಚಾರದಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಆದರೆ ಅದ್ಯಾವುದರ ಬಗ್ಗೆಯೂ ತಯಾರಿ ಮಾಡಿಕೊಂಡಿಲ್ಲ. ಅಲ್ಲದೇ ಹೊರ ರಾಜ್ಯದಲ್ಲಿರುವ ರಾಜ್ಯದ ಜನರನ್ನು ಕರೆತರುವುದರಲ್ಲೂ ಇನ್ನೂ ಗೊಂದಲದಲ್ಲೇ ಇದೆ. ಸರ್ಕಾರ ಕೊರೊನಾ ವಿಚಾರದಲ್ಲಿ ಎಷ್ಟು ಖರ್ಚಾಗಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡಿಲ್ಲ. ಹಾಗಾಗಿ ಈ ಎಲ್ಲಾ ಗೊಂದಲಕ್ಕೆ ತೆರೆ ಎಳೆಯಲು ಸರ್ಕಾರ ಶ್ವೇತ ಪತ್ರವನ್ನು ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ಪರವಾಗಿ ಡಿಕೆಶಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ಅಲ್ಲದೇ ಕೂಲಿ, ಕಟ್ಟಡ ಕಾರ್ಮಿಕರಿಗೆ ಸರ್ಕಾರ ಆಹಾರ ಕಿಟ್ ನೀಡಿಲ್ಲ. ಅವುಗಳನ್ನು ಕಾರ್ಯಕರ್ತರ ಮೂಲಕ ಮತದಾರರಿಗೆ ಹಂಚಿಕೆ ಮಾಡಿದ್ದಾರೆಂದು ಆರೋಪಿಸಿದರು. ಇನ್ನು ಉದ್ಯೋಗಸ್ಥರಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಾಗಲೇ ಸುಮಾರು 5.40 ಲಕ್ಷ ಜನ ಹೊರ ರಾಜ್ಯಕ್ಕೆ ಹೋಗೋದಕ್ಕೆ ತೀರ್ಮಾನ ಮಾಡಿ ಆಗಲೇ ನೋಂದಣಿ ಕೂಡ ಮಾಡಿಸಿಕೊಂಡಿದ್ದಾರೆಂದು ಎಂದರು.
ಸರ್ಕಾರ ಎಲ್ಲಾ ವರ್ಗದ ಜನರನ್ನ ಸರಿಸಮನಾಗಿ ನೋಡುವಲ್ಲಿ ವಿಫಲವಾಗಿದೆ. ಮೇಲ್ವರ್ಗದ ಜನರ ಮಾತು ಕೇಳಿಕೊಂಡು ಬಿಜೆಪಿ ನಾಯಕರು ಸರ್ಕಾರ ನಡೆಸುತ್ತಿದ್ದಾರೆ. ಕಾರ್ಮಿಕ ಕಾಯ್ದೆಯ ವಿಚಾರದಲ್ಲಿ ಸಾಕಷ್ಟು ತಿದ್ದುಪಡಿ ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ.
ಇನ್ನು ಸರ್ಕಾರ ಕಾರ್ಮಿಕರ ಕಾನೂನು ಹಾಗೂ ಎಪಿಎಂಸಿ ಕಾಯ್ದೆಗಳನ್ನ ಮುರಿಯುವುದಕ್ಕೆ ಹೊರಟಿದೆ. ಅದು ಯಾವುದೇ ಕಾರಣಕ್ಕೂ ಸಾಕಾರಗೊಳ್ಳುವುದಿಲ್ಲ. ಕಾಂಗ್ರೆಸ್ ಪಕ್ಷ ಇದನ್ನ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದ ಅವರು, ಕಾಂಗ್ರೆಸ್ ಪಕ್ಷ ರೈತರ ಮತ್ತು ಕಾರ್ಮಿಕರ ಪರ ನಿಲ್ಲಲಿದೆ ಎಂದರು.