ಬೆಂಗಳೂರು:ಸರ್ಕಾರ ಬೋಗಸ್ ಕೋವಿಡ್ ಪ್ರಕರಣಗಳ ಅಂಕಿಅಂಶವನ್ನು ತೋರಿಸುತ್ತಿದ್ದು, ಈ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು.
ನಿನ್ನೆಯವರೆಗೆ ಪಾಸಿಟಿವ್ ದರ ಶೇ 3.9 ಇದೆ. ಶೇ 5 ಇದ್ದರೆ ಲಾಕ್‌ಡೌನ್ ಮಾಡಬೇಕು. ರಾಜ್ಯದಲ್ಲಿ ಪ್ರವಾಸಿ ತಾಣಗಳನ್ನು ಬಂದ್ ಮಾಡಿಲ್ಲ. ನಮ್ಮ ಜಿಲ್ಲೆಯಲ್ಲಿ ಮಾತ್ರ ಬಂದ್ ಮಾಡಿದ್ದಾರೆ. ಸಾವನದುರ್ಗ, ಸಂಗಮ, ಚುಂಚನ ಪಾಲ್ಸ್ ಗೆ ಹೋಗುವಂತಿಲ್ಲ. ಇದು ಬಿಜೆಪಿ ಕರ್ಪ್ಯೂ, ಕೋವಿಡ್ ಕರ್ಪ್ಯೂ ಅಲ್ಲ ಎಂದು ದೂರಿದರು.
ಸಾವಿರಾರು ಫೋನ್ ಕರೆಗಳು ನಮಗೆ ಬರುತ್ತಿವೆ. ಅವರೆಲ್ಲಾ ವೀಕೆಂಡ್ ಕರ್ಫ್ಯೂ ಬಗ್ಗೆ ನೋವು ಹೇಳಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷದವರು ಏನು ಮಾಡ್ತಿದ್ದೀರಾ ಎಂದು ಕೇಳುತ್ತಿದ್ದಾರೆ. ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹಲವು ಜಿಲ್ಲೆಗಳಲ್ಲಿ ನಾವು ರಿಯಾಲಿಟಿ ಚೆಕ್ ಮಾಡಿಸಿದ್ದೇವೆ. ಎಷ್ಟು ಪಾಸಿಟಿವ್ ಕೇಸ್ ಇವೆ?. ಎಷ್ಟು ಜನ ಐಸೋಲೇಶನ್ ಇದ್ದಾರೆ?, ಎಷ್ಟು ಜನ ಟ್ರೀಟ್ಮೆಂಟ್ ಪಡೆದಿದ್ದಾರೆ. ಇದೆಲ್ಲದರ ಡಿಟೇಲ್ಸ್ ಕಲೆಕ್ಟ್ ಮಾಡಿದ್ದೇವೆ. ಎಲ್ಲೂ ಕೂಡ ಶೇ 2ರ ಮೇಲೆ ಕೇಸ್ ದಾಖಲಾಗಿಲ್ಲ ಎಂದರು.
ಲಾಕ್‌ಡೌನ್ ಮೂಲಕ ಸರ್ಕಾರ ಜನರನ್ನು ಬದುಕಿದ್ದಂತೆ ಸಾಯಿಸುತ್ತಿದ್ದಾರೆ. ಈ ಮುಂಚಿನ ಲಾಕ್‌ಡೌನ್ ನಿಂದ 12.2 ಕೋಟಿ ಜನ ಕೆಲಸ ಕಳೆದುಕೊಂಡರು. ಇದು ಸರ್ಕಾರದ ಅಧಿಕೃತ ದಾಖಲೆಗಳಲ್ಲಿದೆ. ರಾಜ್ಯದ ಆದಾಯ ಕುಸಿದಿದೆ. ಸಾಲ ತೆಗೆದುಕೊಂಡಿದ್ದಾರೆ. ಲಾಕ್‌ಡೌನ್ ವಿರುದ್ಧ ನಿನ್ನೆ ಸಂಪುಟ ಸಭೆಯಲ್ಲಿ 6 ಸಚಿವರು ಗಲಾಟೆ ಮಾಡಿದ್ದಾರೆ. ಕರ್ಫ್ಯೂ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ನಾನು ಸಿಎಂಗೆ ಪತ್ರ ಬರೆದಿದ್ದೇನೆ. ನಿಮ್ಮ ಕರ್ಫ್ಯೂ ಸರಿಯಲ್ಲವೆಂದು ಹೇಳಿದ್ದೇನೆ. ನಮ್ಮ ರಾಜಕಾರಣಕ್ಕೆ ಜನರ ಜೀವ ಹಿಂಡಬೇಡಿ, ಕರ್ಪ್ಯೂ ವಾಪಸ್‌ಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ನಾನು ಮತ್ತು ಸಿದ್ದರಾಮಯ್ಯ ಇಬ್ಬರಾದ್ರೂ ನಡೆದೇ ನಡೆಯುತ್ತೇವೆ. ನಾಳೆ ಕನಕಪುರದಲ್ಲಿ ಶಾಸಕರ ಸಭೆ ಇದೆ. ನಮ್ಮ ಕೆಲಸ ನಾವು ಮಾಡುತ್ತೇವೆ. ನಾವು ಮಾರ್ಗಸೂಚಿಗೆ ಗೌರವ ಕೊಡ್ತೇವೆ. ಗೌರವ ಕೊಟ್ಟೇ ಪಾದಯಾತ್ರೆ ಮಾಡುತ್ತೇವೆ. ರಾಜ್ಯದಲ್ಲಿ ಇಂತಹ ದ್ವೇಷದ ರಾಜಕಾರಣ ಇರಲಿಲ್ಲ. ಈ ದ್ವೇಷದ ರಾಜಕಾರಣಕ್ಕೆ ಜನ ಕ್ಷಮಿಸಲ್ಲ ಎಂದು ಆಕ್ರೋಶ ಹೊರಹಾಕಿದರು.