ಬೆಂಗಳೂರು:ಜನರು ನನ್ನ ಜನ್ಮದಿನಕ್ಕೆ ಭರ್ಜರಿ ಉಡುಗೊರೆಯಾಗಿ 135 ಸ್ಥಾನಗಳನ್ನು ನೀಡಿದ್ದಾರೆ. ಅದಕ್ಕಿಂತಲೂ ದೊಡ್ಡ ಗಿಫ್ಟ್ ಸಿಗಲು ಸಾಧ್ಯವೇ?. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಂತಸದ ಹೇಳಿಕೆ.
ಜನ್ಮದಿನದ ಹಿನ್ನೆಲೆಯಲ್ಲಿ ಹೈಕಮಾಂಡ್ನಿಂದ ದೊಡ್ಡ ಗಿಫ್ಟ್ ಸಿಕ್ಕಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಬೆಂಗಳೂರಿನಲ್ಲಿ ಉತ್ತರಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಭಾರಿ ಬಹುಮತದಿಂದ ಗೆದ್ದಿರುವುದು ನನ್ನ ಜನ್ಮದಿನಕ್ಕೆ ಸಿಕ್ಕ ಉಡುಗೊರೆ. ಹೈಕಮಾಂಡ್ ಬಿಟ್ಟು ಬಿಡಿ, ರಾಜ್ಯದ ಜನರೇ ನನಗೆ ದೊಡ್ಡ ಉಡುಗೊರೆ ನೀಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ನನ್ನ ಮೇಲಿನ ವಿಶ್ವಾಸದಿಂದ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿದರು. ನಾವು ಅಧಿಕಾರದಲ್ಲಿ ಇಲ್ಲದಿದ್ದರೂ, ಬಿಜೆಪಿ ಸರ್ಕಾರದಿಂದ ಹಲವು ಅಡ್ಡಿ ಆತಂಕಗಳು ಎದುರಿಸಿದರೂ, 135 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ಜನರು ನಮಗೆ ಬೃಹತ್ ಸ್ಥಾನಗಳಲ್ಲಿ ಗೆಲ್ಲಿಸಿದ್ದಾರೆ. ಡಬಲ್ ಎಂಜಿನ್ ಸರ್ಕಾರದ ಎಲ್ಲಾ ಕಿರುಕುಳ ಮತ್ತು ತೊಂದರೆಗಳನ್ನು ದಾಟಿ ದೊಡ್ಡ ಬಲದೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ. ಕರ್ನಾಟಕದ ಜನತೆ ನನ್ನ ಮೇಲೆ ನಂಬಿಕೆ ಇಟ್ಟು 135 ಕ್ಷೇತ್ರಗಳಲ್ಲಿ ಗೆಲ್ಲಿಸಿ ನನ್ನ ಜನ್ಮದಿನಕ್ಕೆ ಎಂದೂ ಮರೆಯದ ಗಿಫ್ಟ್ ನೀಡಿದ್ದಾರೆ. ಇದಕ್ಕಿಂತ ಬೇರೆ ಉಡುಗೊರೆ ಏನಿದೆ? ಎಂದರು.
ದೆಹಲಿ ಭೇಟಿ ನಿರ್ಧರಿಸಿಲ್ಲ:ಸಿಎಂ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಗೆ ಆಗಮಿಸಲು ಹೈಕಮಾಂಡ್ ಆಹ್ವಾನಿಸಿದ್ದರ ಬಗ್ಗೆ ಮಾತನಾಡಿದ ಡಿಕೆಶಿ, ಸದ್ಯಕ್ಕೆ ನಾನು ದೆಹಲಿಗೆ ಹೋಗುವ ಕುರಿತಾಗಿ ನಿರ್ಧರಿಸಿಲ್ಲ. ಶಾಸಕಾಂಗ ಸಭೆಯಲ್ಲಿ ಒಂದು ಸಾಲಿನ ನಿರ್ಣಯವನ್ನು ಅಂಗೀಕರಿಸಿದ್ದೇವೆ. ಸಿಎಂ ಆಯ್ಕೆ ವಿಚಾರ ಹೈಕಮಾಂಡ್‌ಗೆ ಬಿಡುತ್ತೇವೆ. ಪಕ್ಷದ ಹೈಕಮಾಂಡ್ ಈ ಬಗ್ಗೆ ನಿರ್ಧರಿಸುತ್ತದೆ. ನಾನು ಇನ್ನೂ ದೆಹಲಿಗೆ ಹೋಗಲು ನಿರ್ಧರಿಸಿಲ್ಲ. ಇಂದು ರಾಜ್ಯದೆಲ್ಲೆಡೆಯಿಂದ ನನ್ನನ್ನು ಕಾಣಲು ಬಹಳಷ್ಟು ಜನರು ಬರುತ್ತಿದ್ದಾರೆ. ಮನೆಯಲ್ಲಿ ಕೆಲವು ಆಚರಣೆಗಳಿವೆ. ಒಂದಷ್ಟು ಪೂಜೆ, ದೇವಸ್ಥಾನಕ್ಕೆ ಹೋಗಬೇಕಿದೆ. ಅಲ್ಲಿಗೆ ಹೋಗಿ ದೇವರ ಆಶೀರ್ವಾದ ಪಡೆಯಬೇಕಾಗಿದೆ ಎಂದು ಶಿವಕುಮಾರ್ ಹೇಳಿದರು.