ಕರ್ನಾಟಕ

karnataka

ETV Bharat / state

ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಜವಾಬ್ದಾರಿ ನನ್ನ ಮೇಲಿದೆ: ಡಿಕೆಶಿ

ನೊಂದವರ ಪರ ನಿಲ್ಲಬೇಕು ಎಂದು ನಾನೇ ಎಲ್ಲ ಸಮುದಾಯದವರನ್ನು ಭೇಟಿ ಮಾಡುತ್ತಿದ್ದೇನೆ. ನಿಮ್ಮ ಸಮುದಾಯಕ್ಕೂ ನನಗೂ ಬಹಳ ಆತ್ಮೀಯ ಸಂಬಂಧ ಇದೆ. ನಿಮ್ಮ ನೋವು ಹೇಳಿಕೊಂಡಿದ್ದೀರಿ. ನೀವು ಯಾರಿಗೂ ಕಮ್ಮಿ ಇಲ್ಲ ಎಂದರು.

KPCC President DK Shivakumar
KPCC President DK Shivakumar

By

Published : Sep 3, 2021, 2:02 AM IST

ಬೆಂಗಳೂರು:ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಎಲ್ಲ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಸಮುದಾಯದ ಮುಖಂಡರ ಜತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣ, ಗಾಂಧಿ ಸೇರಿದಂತೆ ಹಲವರ ವಿಚಾರ ನಮ್ಮ ಸಿದ್ಧಾಂತ. ಯಾರಿಗೆ ಧ್ವನಿ ಇಲ್ಲವೋ ಅವರಿಗೆ ಧ್ವನಿಯಾಗಬೇಕು ಎಂದರು.

ಮಡಿವಾಳ ಸಮುದಾಯದ ಮುಖಂಡರ ಜತೆ ಸಂವಾದ

ನೊಂದವರ ಪರ ನಿಲ್ಲಬೇಕು ಎಂದು ನಾನೇ ಎಲ್ಲ ಸಮುದಾಯದವರನ್ನು ಭೇಟಿ ಮಾಡುತ್ತಿದ್ದೇನೆ. ನಿಮ್ಮ ಸಮುದಾಯಕ್ಕೂ ನನಗೂ ಬಹಳ ಆತ್ಮೀಯ ಸಂಬಂಧ ಇದೆ. ನಿಮ್ಮ ನೋವು ಹೇಳಿಕೊಂಡಿದ್ದೀರಿ. ನೀವು ಯಾರಿಗೂ ಕಮ್ಮಿ ಇಲ್ಲ. ನಾನು ಪಕ್ಷದ ಅಧ್ಯಕ್ಷನಾದ ನಂತರ ಅನೇಕ ಸಮುದಾಯದ ನಾಯಕರು ನನ್ನನ್ನು ಭೇಟಿ ಮಾಡಿ ಸನ್ಮಾನ ಮಾಡಲು ಅವಕಾಶ ಕೋರಿದರು. ಆಗ ನಾನು, ಯಾರೂ ಬರಬೇಡಿ, ನಾನೇ ನಿಮ್ಮ ಬಳಿಗೆ ಬರುತ್ತೇನೆಂದು ಹೇಳಿದ್ದೆ ಎಂದು ವಿವರಿಸಿದರು.

ಮಡಿವಾಳ ಸಮುದಾಯದ ಮುಖಂಡರ ಜತೆ ಸಂವಾದ ಕಾರ್ಯಕ್ರಮ

ನಾನು ಮೀನುಗಾರರನ್ನು ಭೇಟಿ ಮಾಡಿದ್ದೇನೆ. ಒಬ್ಬ ಮೀನುಗಾರರನಿಂದ 10 ಉದ್ಯೋಗ ಸೃಷ್ಟಿಯಾಗುತ್ತದೆ. ನೇಕಾರರನ್ನು ಭೇಟಿ ಮಾಡಿದ್ದೇನೆ. ತಿಗಳರ ಸಮುದಾಯದವರನ್ನು ಭೇಟಿ ಮಾಡಿದ್ದೇನೆ. ಇಂದು ನಿಮ್ಮ ಬಳಿ ಬಂದಿದ್ದೇನೆ. ನೀವಿಲ್ಲದೇ ಈ ಸಮಾಜ ಇಲ್ಲ. ನೀವು ಬಟ್ಟೆ ಸ್ವಚ್ಛ ಮಾಡಿಕೊಡದಿದ್ದರೆ ಆಗುವುದಿಲ್ಲ. ನೀವು ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಬರುತ್ತಿರುವವರು. ನಿಮಗೆ ನಾವು ಶಕ್ತಿ ತುಂಬಬೇಕು. ನಿಮ್ಮಲ್ಲಿ ಕೆಲವರು ಮಾತ್ರ ವಿದ್ಯಾಭ್ಯಾಸ ಮಾಡಿದ್ದಾರೆ. ರಾಜಕೀಯವಾಗಿ ನೀವು ಇನ್ನು ಶಕ್ತಿ ಪಡೆಯಬೇಕು, ಬೆಳೆಯಬೇಕು. ದೇವರು ಬಲಿ ತೆಗೆದುಕೊಳ್ಳುವಾಗ ಕುದುರೆ, ಆನೆ, ಹುಲಿಯನ್ನು ಬಲಿ ಕೇಳುವುದಿಲ್ಲ. ಬಲಿ ಕೇಳುವುದು ಕುರಿ, ಕೋಳಿ, ಹೆಚ್ಚೆಂದರೆ ಕೋಣ ಮಾತ್ರ. ಅವು ಸಾದು ಪ್ರಾಣಿಗಳೆಂದು. ಆದೇ ರೀತಿ ಬಿಜೆಪಿ ಆರ್ ಶಂಕರ್ ಅವರನ್ನು (ಮಾಜಿ ಸಚಿವ) ಬಲಿ ತೆಗೆದುಕೊಂಡಿದೆ ಎಂದರು.

ವಿವಿಧ ಮುಖಂಡರಿಂದ ಡಿಕೆಶಿ ಭೇಟಿ

ಇಲ್ಲಿರುವ ಅನೇಕ ನಾಯಕರು ನಮ್ಮ ಸ್ನೇಹಿತರು. ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ನಾನು ನಿಮ್ಮ ಜತೆ ಇದ್ದೇನೆ ಎಂದು ಹೇಳಲು ಬಂದಿದ್ದೇನೆ. ನಾನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಮುಂದಿನ ದಿನಗಳಲ್ಲಿ ನಿಮ್ಮ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ. ನಮ್ಮ ಪಕ್ಷ ರಾಷ್ಟ್ರ ಮಟ್ಟದಲ್ಲಿ ಜಾತಿ, ಧರ್ಮಗಳ ವಿಚಾರವಾಗಿ ಚರ್ಚೆ ಮಾಡುತ್ತಿದೆ. ನಿಮ್ಮ ನೋವು, ಸಮಸ್ಯೆಗೆ ಧ್ವನಿಯಾಗಿ ಕಾಂಗ್ರೆಸ್ ಪಕ್ಷ ಇರುತ್ತದೆ. ನಾನು ಕೂಡ ನಿಂತಿರುತ್ತೇನೆ. ನಿಮ್ಮ ಬೇಡಿಕೆಯನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ನಾವು ಪ್ರಣಾಳಿಕೆಯಲ್ಲಿ ಈ ವಿಚಾರ ಸೇರಿಸಿದ ಮೇಲೆ ಅದನ್ನು ಪೂರೈಸದೇ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಮಡಿವಾಳ ಸಮುದಾಯ ಭೇಟಿ ಮಾಡಿದ ಡಿಕೆಶಿ

ಈಗ ಎಲ್ಲರಿಗೂ ಜಾತಿ ಪಿಡುಗು ಬಂದಿದೆ. ಎಲ್ಲರೂ ಬಂದು ತಮ್ಮ, ತಮ್ಮ ಸಮುದಾಯಗಳ ಬಗ್ಗೆ ಲಕ್ಷ, ಲಕ್ಷಗಳಲ್ಲಿ ಲೆಕ್ಕ ಕೊಡುತ್ತಾರೆ. ಅವರ ಲೆಕ್ಕ ಕೇಳಿದರೆ ರಾಜ್ಯದ ಜನಸಂಖ್ಯೆ 20 ಕೋಟಿ ದಾಟುತ್ತದೆ. ನಿಮ್ಮ ನೋವು ಕೇಳಲು ಬೇರೆಯವರು ಬಂದಿದ್ದರೋ ಇಲ್ಲವೋ ನನಗೆ ಬೇಕಿಲ್ಲ. ಆದರೆ ರಾಜಕಾರಣಿಗಳು ನಿಮಗೆ ಅನ್ಯಾಯ ಮಾಡಿಕೊಂಡು ಬಂದಿರುವುದು ನಿಜ. ಅದನ್ನು ಸರಿಪಡಿಸಿ ನಿಮಗೆ ನ್ಯಾಯ ಒದಗಿಸಬೇಕು ಎಂಬುದು ನನ್ನ ಸಂಕಲ್ಪ. ಈ ಹಿಂದೆ ಕಾಂಗ್ರೆಸ್ ಸರ್ಕಾರ ನಿಮ್ಮ ಸಮುದಾಯಕ್ಕೆ ಅನೇಕ ನೆರವು ನೀಡಿದೆ. ಮುಂದೆಯೂ ನೀಡಲಿದೆ.

ಕಾಂಗ್ರೆಸ್ ಮನೆ ಬಾಗಿಲು ನಿಮಗೆ ಸದಾ ತೆರೆದಿರುತ್ತದೆ. ನೀವು ಎಷ್ಟೇ ದೊಡ್ಡವರಾಗಿ ಬೆಳೆದರೂ ನಿಮ್ಮ ವೃತ್ತಿಯನ್ನು ಮಾತ್ರ ಬಿಡಬೇಡಿ. ಅದೇ ನಿಮ್ಮ ಹೆಮ್ಮೆ. ನಿಮ್ಮ ಪರವಾಗಿ ಎಲ್ಲಿ, ಯಾವ ರೀತಿ ಹೋರಾಡಬೇಕೋ ಆ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

ಇದನ್ನೂ ಓದಿರಿ: ನೂತನ ಶ್ರೀಗಂಧ ನೀತಿ ಜಾರಿಗೆ ಕರಡು ಸಿದ್ಧಪಡಿಸಲು ಅಧಿಕಾರಿಗಳಿಗೆ ಸಚಿವ ಕತ್ತಿ ಸೂಚನೆ

ವಿವಿಧ ಮುಖಂಡರು ಭೇಟಿ:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ವಿವಿಧ ಮುಖಂಡರು ಭೇಟಿ ಮಾಡಿ ಚರ್ಚಿಸಿದರು. ಮೊದಲು ಸೇವಾದಳದ ನೂತನ ಪ್ರಧಾನ ಸಂಘಟಕ ರಾಮಚಂದ್ರ ಭೇಟಿ ಮಾಡಿ, ಕೃತಜ್ಞತೆ ಸಲ್ಲಿಸಿದರು. ಹಿಂದಿನ ಪ್ರಧಾನ ಸಂಘಟಕಿ ಪ್ಯಾರೇಜಾನ್ ಮತ್ತಿತರ ಸೇವಾದಳ ಮುಖಂಡರು, ಕಾರ್ಯಕರ್ತರು ಇದ್ದರು. ಇದಾದ ಬಳಿಕ ಮಾಜಿ ಸಚಿವ, ಶಾಸಕ ಕೃಷ್ಣಬೈರೇಗೌಡ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಮುಖಂಡರಾದ ಶ್ರೀನಿವಾಸಯ್ಯ, ಜಯಗೋಪಾಲ್, ಆದಿರಾಮ್, ದಿಲೀಪ್ ಮತ್ತಿತರರು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.

ABOUT THE AUTHOR

...view details