ಬೆಂಗಳೂರು:ಜೂನ್ 29ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಪಕ್ಷದಿಂದ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದೇ ಕಾಂಗ್ರೆಸ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದಿನದಿಂದ ದಿನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ, ಸದ್ಯ ವಿಧಾನ ಪರಿಷತ್ನಿಂದ ನಿವೃತ್ತಿಯಾಗುತ್ತಿರುವ ಎಲ್ಲಾ 10 ಮಂದಿ ಅಭ್ಯರ್ಥಿಗಳು ಮರು ಆಯ್ಕೆ ಬಯಸಿದ್ದಾರೆ.
ಆದರೆ ಇವರಲ್ಲಿ ಕೆಲವರನ್ನು ಸಮಾಧಾನಪಡಿಸಬಹುದು. ಕೆಲ ಹಿರಿಯರನ್ನು ಅತ್ಯಂತ ವಿಶ್ವಾಸ, ಮುತುವರ್ಜಿ ಹಾಗೂ ಸಂಯಮದಿಂದ ಸಮಾಧಾನಪಡಿಸಬೇಕಾಗಿದೆ. ಯಾವುದೇ ಅಸಮಾಧಾನ, ಅತೃಪ್ತಿ, ಪಕ್ಷದ ಮೇಲೆ ಬೇಸರವಾಗದಂತೆ ನೋಡಿಕೊಳ್ಳಬೇಕಾಗಿದೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖುದ್ದು ವಿವಿಧ ನಾಯಕರ ಮನೆಗೆ ಭೇಟಿ ನೀಡಿ ಸಮಾಲೋಚಿಸುವ ಕಾರ್ಯ ಮಾಡುತ್ತಿದ್ದಾರೆ.
ಯಾರ ಅವಧಿ ಮುಕ್ತಾಯ
ಜೂನ್ 30ರಂದು ತೆರವಾಗಲಿರುವ ರಾಜ್ಯ ವಿಧಾನ ಪರಿಷತ್ನ 7 ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಿಗದಿಯಾಗಿದೆ. ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದ ಕಾಂಗ್ರೆಸ್ ಪಕ್ಷದ ನಜೀರ್ ಅಹಮ್ಮದ್, ಜಯಮ್ಮ, ಎಂ.ಸಿ.ವೇಣುಗೋಪಾಲ್, ಎನ್.ಎಸ್.ಬೋಸರಾಜು, ಹೆಚ್.ಎಂ.ರೇವಣ್ಣ, ಜೆಡಿಎಸ್ ಪಕ್ಷದ ಟಿ.ಎ.ಸರವಣ ಹಾಗೂ ಪಕ್ಷೇತರರಾದ ಡಿ.ಯು.ಮಲ್ಲಿಕಾರ್ಜುನ ನಿವೃತ್ತಿಯಾಗುತ್ತಿದ್ದಾರೆ.
ಇನ್ನೊಂದೆಡೆ ಇವರ ಜತೆ ಕಾಂಗ್ರೆಸ್ ಪಕ್ಷದಿಂದ ನಾಮ ನಿರ್ದೇಶನಗೊಂಡಿರುವ ಡಾ. ಜಯಮಾಲಾ ರಾಮಚಂದ್ರ, ಅಬ್ದುಲ್ ಜಬ್ಬಾರ್, ಐವಾನ್ ಡಿಸೋಜಾ, ಇಕ್ಬಾಲ್ ಅಹಮ್ಮದ್ ಸರಡಗಿ, ತಿಪ್ಪಣ್ಣ ಕಮಕನೂರ್ ನಿವೃತ್ತಿಯಾಗುತ್ತಿದ್ದಾರೆ.
ಅಲ್ಲಿಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ 10 ಸದಸ್ಯರ ಸ್ಥಾನ ಖಾಲಿ ಆಗುತ್ತಿದ್ದು, ಇದರಲ್ಲಿ ಮರಳಿ ಕೇವಲ ಎರಡು ಸ್ಥಾನ ಮಾತ್ರ ಪಕ್ಷಕ್ಕೆ ದಕ್ಕಲಿದೆ. ವಿಧಾನಸಭೆ ಸದಸ್ಯರ ಸಂಖ್ಯೆ 68 ಆಗಿರುವ ಹಿನ್ನೆಲೆ ಇಬ್ಬರನ್ನು ಮಾತ್ರ ಗೆಲ್ಲಿಸಿಕೊಳ್ಳುವ ಅವಕಾಶ ಕಾಂಗ್ರೆಸ್ ಪಕ್ಷಕ್ಕಿದೆ. ಉಳಿದಂತೆ ನಾಲ್ಕು ಸ್ಥಾನ ಬಿಜೆಪಿ, ಒಂದು ಸ್ಥಾನ ಜೆಡಿಎಸ್ ಗೆದ್ದುಕೊಳ್ಳುವ ಅವಕಾವಿದೆ. ಉಳಿದಂತೆ ಐದು ನಾಮ ನಿರ್ದೇಶಿತ ಸದಸ್ಯರನ್ನು ಆಡಳಿತ ಪಕ್ಷ ಬಿಜೆಪಿ ಆಯ್ಕೆ ಮಾಡಿಕೊಳ್ಳಲಿದೆ.