ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹಾಸನ ಜಿಲ್ಲೆಯ ಸಕಲೇಶಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಜೊತೆ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಅವರ ಅಹವಾಲುಗಳನ್ನು ಆಲಿಸಿದ್ದಾರೆ.
ಹಾಸನ ಜಿಲ್ಲೆಯು ಜೆಡಿಎಸ್ ಹಿರಿಯ ನಾಯಕ ಹೆಚ್.ಡಿ.ರೇವಣ್ಣನವರ ಹಿಡಿತದಲ್ಲಿದ್ದು, ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ 6 ರಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಆದರೆ ಕಾಂಗ್ರೆಸ್ ಖಾತೆ ತೆರೆಯಲು ವಿಫಲವಾಗಿದೆ. ನಿಧಾನವಾಗಿ ಬಿಜೆಪಿ ಜಿಲ್ಲೆಯಲ್ಲಿ ನೆಲೆ ಕಲ್ಪಿಸಿಕೊಳ್ಳುತ್ತಿದ್ದು, ಬೇಲೂರು ಹಾಗೂ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸೋಲು ಅನುಭವಿಸಿರುವ ಬಿಜೆಪಿ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಇನ್ನಷ್ಟು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಮಧ್ಯೆ ಹೇಗಾದರೂ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ವೃದ್ಧಿಸಿಕೊಳ್ಳಲು ನಿರ್ಧರಿಸಿರುವ ಕಾಂಗ್ರೆಸ್, ಒಂದೊಂದೇ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಕಾರ್ಯತಂತ್ರ ರೂಪಿಸುತ್ತಿದೆ.
ಮೊದಲ ಸಭೆಯಾಗಿ ಡಿಕೆಶಿಯವರು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ. 2008ರಿಂದ ನಿರಂತರವಾಗಿ ಮೂರು ಅವಧಿಗೆ ಶಾಸಕರಾಗಿ ಜೆಡಿಎಸ್ನಿಂದ ಆಯ್ಕೆಯಾಗಿರುವ ಹೆಚ್.ಕೆ.ಕುಮಾರಸ್ವಾಮಿ ಪ್ರಸ್ತುತ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದಾರೆ. ಇವರನ್ನು ಸೋಲಿಸುವ ಜೊತೆಗೆ ಬಿಜೆಪಿಯನ್ನು ಎದುರಿಸುವ ಅಭ್ಯರ್ಥಿಯ ಆಯ್ಕೆ ಹಾಗೂ ಅವರನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.