ಬೆಂಗಳೂರು:ಬಳ್ಳಾರಿ ಪಾಲಿಕೆ ಮೇಯರ್ ಆಯ್ಕೆ ವಿಚಾರವಾಗಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು. ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಬಳ್ಳಾರಿ ಕೈ ಮುಖಂಡರ ಜೊತೆ ಡಿಕೆಶಿವಕುಮಾರ್ ಅವರು ಮಹತ್ವದ ಸಭೆ ನಡೆಸಿದರು. ಈ ವೇಳೆ ಮೇಯರ್, ಉಪಮೇಯರ್ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆಯಿತು.
ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಭೆ ಏ.27ರಂದು ನಡೆದಿದ್ದ ಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಕ್ಕಿಲ್ಲ. ಇಲ್ಲಿಯವರೆಗೂ ಮೇಯರ್ ಆಯ್ಕೆ ನಡೆದಿರಲಿಲ್ಲ. ವಿಳಂಬವಾಗಿ ಮೇಯರ್,ಉಪಮೇಯರ್ ಆಯ್ಕೆಗೆ ಚಾಲನೆ ಸಿಕ್ಕಿದೆ. ಹೀಗಾಗಿ ಇಂದು ಮೇಯರ್ ಆಯ್ಕೆ ಬಗ್ಗೆ ಡಿಕೆಶಿ ಸಭೆ ನಡೆಸಿದರು.
ಸುಮಾರು 39 ವಾರ್ಡ್ಗಳಿಗೆ ನಡೆದಿದ್ದ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್- 21, ಬಿಜೆಪಿ-13, ಐವರು ಪಕ್ಷೇತರರು ಗೆದ್ದಿದ್ದರು. ಪಾಲಿಕೆ ಎಲೆಕ್ಷನ್ನಲ್ಲಿ ಬಿಜೆಪಿಗೆ ಮುಖಭಂಗವಾಗಿತ್ತು. ಶಾಸಕ ಸೋಮಶೇಖರ ರೆಡ್ಡಿ ಪುತ್ರನೇ ಚುನಾವಣೆಯಲ್ಲಿ ಸೋತಿದ್ದರು.
ಸಭೆ ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಅಧ್ಯಕ್ಷರ ನೇತೃತ್ವದಲ್ಲಿ ಬಳ್ಳಾರಿ ಮುಖಂಡರ ಜೊತೆ ಸಭೆ ನಡೆಸಲಾಗಿದೆ. ಜಿಲ್ಲೆಯ ಎಲ್ಲಾ ಪ್ರಮುಖರು ಭಾಗಿಯಾಗಿದ್ದರು. ಚುನಾವಣೆ ನಡೆದು ಆರು ತಿಂಗಳಾಗಿತ್ತು. ಕೋವಿಡ್ ನೆಪವೊಡ್ಡಿ ಮೇಯರ್ ಚುನಾವಣೆ ಮುಂದೂಡಿಕೆ ಮಾಡಿದ್ದಾರೆ. ಪಾಲಿಕೆಯಲ್ಲಿ ನಮಗೆ ಪೂರ್ಣ ಬಹುಮತವಿದೆ. ಐವರು ಪಕ್ಷೇತರರು ಕೂಡ ನಮಗೆ ಬೆಂಬಲ ಕೊಟ್ಟಿದ್ದಾರೆ. ಬಳ್ಳಾರಿ ಪಾಲಿಕೆಯಲ್ಲಿ ನಾವು ಅಧಿಕಾರ ಹಿಡಿಯುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಭೆ ಸಭೆ ವಿಫಲ :
ಮೇಯರ್, ಉಪಮೇಯರ್ ಆಯ್ಕೆ ವಿಚಾರವಾಗಿ ಕರೆದಿದ್ದ ಸಭೆಯಲ್ಲಿ ಒಮ್ಮತ ಮೂಡಿ ಕಂಡುಬರಲಿಲ್ಲ, ಪರಿಣಾಮ ಸಭೆ ವಿಫಲವಾಗಿದ್ದು, ವೀಕ್ಷಕರನ್ನು ಬಳ್ಳಾರಿಗೆ ಕಳಿಸಲು ತೀರ್ಮಾನ ಮಾಡಲಾಗಿದೆ. ವೀಕ್ಷಕರ ವರದಿ ಬಂದ ನಂತರ ಮೇಯರ್,ಉಪಮೇಯರ್ ಆಯ್ಕೆ ನಡೆಯಲಿದೆ.
ಮೇಯರ್ ಸ್ಥಾನದ ಆಕಾಂಕ್ಷಿ ಪೂಜಾರಿ ಗಾದೆಪ್ಪ ಮಾತನಾಡಿ, ಏ.27ರಂದು ಪಾಲಿಕೆಗೆ ಚುನಾವಣೆ ನಡೆದಿತ್ತು. ಕೊರೊನಾ ನೆಪವೊಡ್ಡಿ ಮುಂದೂಡಿದ್ದರು. ಡಿಕೆಶಿಯವರು ಇಂದು ಸಭೆ ನಡೆಸಿದ್ದಾರೆ. ನಮಗೇ ಮೆಜಾರಿಟಿ ಇದೆ. ನಾವೇ ಅಧಿಕಾರ ಹಿಡಿಯುತ್ತೇವೆ. ನಾವು ವೀಕ್ಷಕರನ್ನು ಅಲ್ಲಿಗೆ ಕಳಿಸುತ್ತೇವೆ. ಅವರು ಯಾರು ಮೇಯರ್ ಅನ್ನೋದನ್ನು ಹೇಳುತ್ತಾರೆ. ಅದರಂತೆ ನಾವು ಆಯ್ಕೆ ಮಾಡುತ್ತೇವೆ ಎಂದರು.
ಇನ್ನೊಬ್ಬ ಆಕಾಂಕ್ಷಿ ವಿವೇಕ್ ಮಾತನಾಡಿ, ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಪಕ್ಷದ ಕೆಲಸವನ್ನು ಸರಿಯಾಗಿ ಮಾಡಬೇಕು. ಅಂತವರನ್ನು ನಾವೇ ಮೇಯರ್ ಮಾಡುತ್ತೇವೆ. ಇಲ್ಲಿ ಮಾಡಿದರೆ ಬೇರೆಯವರಿಗೆ ಅಸಮಾಧಾನವಾಗುತ್ತೆ. ಅಲ್ಲಿಗೆ ನಾವೇ ವೀಕ್ಷಕರನ್ನ ಕಳಿಸ್ತೇವೆ. ನಾವೇ ಎಲ್ಲರ ಡೇಟಾ ಸಂಗ್ರಹ ಮಾಡ್ತೇವೆ. ಪಾರ್ಟಿಗೆ ಬದ್ಧರಾಗಿರುವವರನ್ನು ಮೇಯರ್ ಮಾಡುತ್ತೇವೆ.
ಐದು ವರ್ಷ ಐವರು ಮೇಯರ್ ಆಗುತ್ತಾರೆ. ಉಪಮೇಯರ್ ಕೂಡ ಐವರು ಆಗಬಹುದು. ಹೀಗಂತಾ ನಮಗೆ ಡಿಕೆಶಿ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಉಗ್ರಪ್ಪ ಸೇರಿದಂತೆ ಬಳ್ಳಾರಿ ಕೈ ಮುಖಂಡರು ಭಾಗಿಯಾಗಿದ್ದರು.
ಇದನ್ನೂ ಓದಿ: ಗೃಹ ಸಚಿವರ ತವರು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕ್ರೈಂ ರೇಟ್ : ಇದಕ್ಕೆ ಮುಕ್ತಿ ಯಾವಾಗ?